

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಮಂಜೇಶ್ವರ ತಾಲೂಕಿನ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಮಿನಿ ಸ್ಟೇಡಿಯಂನಲ್ಲಿ ರಾತ್ರಿ ವೇಳೆ ನಡೆಯುವ ಕ್ರೀಡೆಗಳು ಸಾರ್ವಜನಿಕರ ಪಾಲಿಗೆ ಹೆಚ್ಚಿನ ಸಮಸ್ಯೆ ತಂದೊಡ್ಡುತ್ತಿದೆ. ಒಂದೆಡೆ ಶಬ್ದ ಮಾಲಿನ್ಯ, ಇನ್ನೊಂದೆಡೆ ಪರಿಸರ ಹಾಳುಗೈಯುತ್ತಿರುವ ಕೃತ್ಯ ನಡೆಯುತ್ತಿರುವುದು ಸಮಸ್ಯೆ ಉಂಟುಮಾಡುತ್ತಿದೆ. ಸ್ಟೇಡಿಯಂನಲ್ಲಿ ಪಂಚಾಯಿತಿ ಅನುಮತಿಯೊಂದಿಗೆ ಕ್ರಿಕೆಟ್, ಫುಟ್‌ಬಾಲ್ ಸೇರಿದಂತೆ ವಿವಿಧ ಪಂದ್ಯಾಟ ನಡೆಸಲಾಗುತ್ತಿದ್ದು, ಈ ಮಧ್ಯೆ ವ್ಯಾಪಕ ಶಬ್ದ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾತ್ರಿ ವೇಳೆ ಮೈದಾನದೊಳಗೆ ಕೇಳಿಸುವ ರೀತಿ ಮೈಕ್ ಅಳವಡಿಸಿದರೆ ಸಾಕು. ಊರಿಡೀ ಅಬ್ಬರಿಸುವ ರೀತಿಯಲ್ಲಿ ಧ್ವನಿವರ್ಧಕ ಅಳವಡಿಸುವುದರಿಂದ ವಿವಿಧ ಪರೀಕ್ಷೆಗಳಿಗಾಗಿ ಅಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ, ಎಳೆಯ ಮಕ್ಕಳಿಗೆ ಸಮಸ್ಯೆ ಉಂಟಾಗುತ್ತಿರುವುದಾಗಿ ಸ್ಥಳೀಯರು ದೂರುತ್ತಾರೆ. ಕೆಲವೊಮ್ಮೆ ಎರಡರಿಂದ ಮೂರು ದಿನಗಳ ಕಾಲ ನಿರಂತರವಾಗಿ ಏರು ಧ್ವನಿಯಲ್ಲಿ ಮೈಕ್ ಅಳವಡಿಸಿ ಪಂದ್ಯಾಟ ಆಯೋಜಿಸಲಾಗುತ್ತಿದೆ. ಮಂಜೇಶ್ವರ ಬ್ಲಾಕ್ ಪಂಚಾಯಿತಿಯ ಅಂದಿನ ಅಧ್ಯಕ್ಷ ಟಿ.ಆರ್.ಕೆ.ಭಟ್ ಪೆರ್ಲ ಅವರ ಶ್ರಮದಿಂದ ಪಂಚಾಯಿತಿಗೆ ಸುಸಜ್ಜಿತ ಕ್ರೀಡಾಂಗಣ ಮಂಜೂರಾಗಿ ಲಭಿಸಿದ್ದು, ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ್ ಅವರ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಸ್ಟೇಡಿಯಂ ಅಭಿವೃದ್ಧಿಗೆ ಶಾಸಕ ಎ.ಕೆ.ಎಂ.ಅಶ್ರಪ್ ಸರ್ಕಾರದಿಂದ ಒಂದು ಕೋಟಿ ರೂ. ಬಜೆಟ್‌ನಲ್ಲಿ ಮಂಜೂರಾಗುವಂತೆ ಮಾಡಿದ್ದಾರೆ. ಮಾನದಂಡವಿರಲಿ: ಕ್ರೀಡಾಕೂಟಗಳಿಗೆ ಕ್ರೀಡಾಂಗಣ ಬಿಟ್ಟುಕೊಡುವ ಸಂದರ್ಭ ಸ್ವಚ್ಛತೆಗೆ ಗ್ರಾಪಂ ಅಗತ್ಯ ಮಾನದಂಡ ಪಾಲಿಸಬೇಕಾದ ಅಗತ್ಯವಿದೆ ಎಂಬುದು ಕ್ರೀಡಾಪ್ರೇಮಿಗಳ ಅಭಿಪ್ರಾಯ. ಶಬ್ದಮಾಲಿನ್ಯ ತಡೆಗಟ್ಟುವುದರ ಜತೆಗೆ ತ್ಯಾಜ್ಯ ನಿರ್ವಹಣೆಗೆ ಗ್ರಾಪಂ ಅಗತ್ಯ ನಿರ್ಬಂಧನೆ ಜಾರಿಗೊಳಿಸುವಂತೆ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಶುಚಿತ್ವಕ್ಕಿಲ್ಲ ಆದ್ಯತೆ ಪಂದ್ಯಾಟ ಆಯೋಜಿಸುತ್ತಿರುವ ಕೆಲವೊಂದು ಸಂಘಟನೆಗಳು ಶುಚಿತ್ವಕ್ಕೆ ಆದ್ಯತೆ ನೀಡದಿರುವುದರಿಂದ ಮೈದಾನದ ಸುತ್ತು ವ್ಯಾಪಕವಾಗಿ ಪ್ಲಾಸ್ಟಿಕ್ ಸಹಿತ ನಾನಾ ತ್ಯಾಜ್ಯ ತುಂಬಿಕೊಳ್ಳುತ್ತಿದೆ. ಮೈದಾನದ ಸುತ್ತು ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯ ಜಾನುವಾರುಗಳ ಹೊಟ್ಟೆ ಸೇರುತ್ತಿದೆ. ಇದರಿಂದ ಜಾನುವಾರುಗಳಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕ್ರೀಡಾಪಟುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಮೈದಾನಗಳಲ್ಲಿ ಬಜಕೂಡ್ಲು ಮಿನಿ ಸ್ಟೇಡಿಯಂ ಒಂದಾಗಿದ್ದು, ಇದರ ನಿರ್ವಹಣೆ ಬಗ್ಗೆ ಪಂಚಾಯಿತಿ ಕಾಳಜಿ ವಹಿಸಲಿದೆ. ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವ ರೀತಿಯಲ್ಲಿ ಕ್ರೀಡೆ ನಡೆಸಲು ಪಂಚಾಯಿತಿ ಅವಕಾಶ ನೀಡದು.ಸ್ವಚ್ಛತೆ, ಇತರ ಸಮಸ್ಯೆ ಬಗ್ಗೆ ಚರ್ಚಿಸಲು ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸಭೆ ಆಯೋಜಿಸಲಾಗುವುದು. ಸ್ಟೇಡಿಯಂ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಮೀಸಲಿರಿಸಿರುವ ಮೊತ್ತ ವಿನಿಯೋಗಿಸಲು ಆಡಳಿತಾತ್ಮಕ ಅನುಮತಿ ಲಭಿಸಿದೆ. ಸೋಮಶೇಖರ ಜೆ.ಎಸ್., ಎಣ್ಮಕಜೆ ಗ್ರಾಪಂ ಅಧ್ಯಕ್ಷರು.