ಮೋದಿಗೆ ಎನ್​ಡಿಎ ಸರ್ವಾನುಮತದ ಬೆಂಬಲ.. ರಾಷ್ಟ್ರಪತಿ ಭೇಟಿಗೆ ನಾಯಕರು - ಪ್ರಮಾಣ ವಚನ ಸ್ವೀಕರ ದಿನವೂ ಫಿಕ್ಸ್​!

pm modi
Published on

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಲು ಎನ್‌ಡಿಎ ಮೈತ್ರಿಕೂಟ ಸರ್ವಾನುಮತದ ನಿರ್ಧಾರ ಕೈಗೊಂಡಿದೆ. ಎನ್‌ಡಿಎ ನಾಯಕ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸರ್ಕಾರ ರಚನೆ ಮತ್ತು ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಎನ್‌ಡಿಎ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೈತ್ರಿಕೂಟದ ಪ್ರಮುಖ ಪಾಲುದಾರರಾದ ಟಿಡಿಪಿ ಮುಖ್ಯಸ್ಥ ನಾ.ರಾ. ಚಂದ್ರಬಾಬು ನಾಯ್ಡು ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ಪತ್ರವನ್ನು ನೀಡಿದರು.

ರಾಷ್ಟ್ರಪತಿ ಭೇಟಿ: ಎನ್‌ಡಿಎ ಪ್ರಮುಖರ ಸಭೆ ಮುಗಿದ ನಂತರ ಮೈತ್ರಿಕೂಟದ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದೆ. ಸಂಜೆ 7.30ಕ್ಕೆ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ನಿಯೋಗ ರಾಷ್ಟ್ರಪತಿಗಳಿಗೆ ಮನವಿ ಮಾಡಲಿದೆ. ಇದರಲ್ಲಿ ಭಾಗವಹಿಸುವ ಪಕ್ಷಗಳಿಂದ ಸರ್ಕಾರ ರಚಿಸಲು ಅಗತ್ಯವಾದ ಸಂಖ್ಯಾಬಲವಿದೆ ಎಂದು ಬೆಂಬಲ ಪತ್ರವನ್ನು ಸಲ್ಲಿಸಲಿದೆ.

ಮೂಲಗಳ ಪ್ರಕಾರ ಇದೇ ತಿಂಗಳ 8ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೋದಿ ನಿರ್ಧರಿಸಿದ್ದಾರೆ.

17ನೇ ಲೋಕಸಭೆಯ ವಿಸರ್ಜನೆ: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಸ್ವಂತ ಬಲದಿಂದ 240 ಸ್ಥಾನಗಳನ್ನು ಗೆದ್ದುಕೊಂಡರೂ ಬಹುಮತದ ಕೊರತೆ ಎದುರಿಸಿತು. ಆದಾಗ್ಯೂ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 292 ಸ್ಥಾನಗಳನ್ನು ಗೆದ್ದುಕೊಂಡಿತು. ಸರ್ಕಾರ ರಚಿಸಲು ಅಗತ್ಯವಿರುವ ಬಹುಮತದ ಮಾರ್ಕ್ 272 ಅನ್ನು ಕ್ರಾಸ್​ ಮಾಡಿದೆ. ಈ ನಡುವೆ 17ನೇ ಲೋಕಸಭೆಯನ್ನು ವಿಸರ್ಜಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಬೆಳಗ್ಗೆ ನಿರ್ಧಾರ ಕೈಗೊಂಡಿದ್ದು, 18ನೇ ಲೋಕಸಭೆ ರಚನೆಗೆ ನಾಂದಿ ಹಾಡಿದೆ.

ನಂತರ ಸ್ವತಃ ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸರ್ಕಾರದ ರಾಜೀನಾಮೆಯನ್ನು ಹಸ್ತಾಂತರಿಸಿದರು. ತಕ್ಷಣ ಅನುಮೋದನೆ ನೀಡಿದ ರಾಷ್ಟ್ರಪತಿಗಳು, ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೆ ಹಂಗಾಮಿ ಪ್ರಧಾನಿಯಾಗಿ ಮುಂದುವರಿಯುವಂತೆ ಮೋದಿಯವರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net