

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನಟಿ ರಿಯಾ ಚಕ್ರವರ್ತಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ) ಬಂಧಿಸಿದೆ. ಈ ಸಂದರ್ಭದಲ್ಲಿ ರಿಯಾ ಚಕ್ರವರ್ತಿ, ಬಾಲಿವುಡ್ನ ಒಂದಿಷ್ಟು ಕಲಾವಿದರ ಹೆಸರನ್ನು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಪಟ್ಟಿಯಲ್ಲಿ ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಮತ್ತು ಫ್ಯಾಶನ್ ಡಿಸೈನರ್ ಸಿಮೋನ್ ಖಂಬತ್ತಾ ಅವರ ಹೆಸರಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಹೇಳಿದೆ (ಎನ್.ಸಿ.ಬಿ) ಹೇಳಿದೆ.
ಇದಕ್ಕೂ ಮುನ್ನ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಕುರಿತು ನಟಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಎನ್ಸಿಬಿ ಅರೆಸ್ಟ್ ಮಾಡಿತ್ತು. ತನಿಖೆ ಸಂದರ್ಭದಲ್ಲಿ ಡ್ರಗ್ಸ್ ದಂಧೆಯಲ್ಲಿ ಬಾಲಿವುಡ್ನ 25 ಜನಪ್ರಿಯ ಕಲಾವಿದರ ಹೆಸರುಗಳನ್ನು ರಿಯಾ ಹೇಳಿದ್ದರಂತೆ, ಈ ಪೈಕಿ ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಸೇರಿದಂತೆ ಹಲವರು ಹೆಸರುಗಳು ಇವೆಯಂತೆ ಎಂಬಂತಹ ಸುದ್ದಿಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲ, ಆ ನಟ-ನಟಿಯರನ್ನು ಎನ್.ಸಿ.ಬಿಯವರು ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ, ಎನ್.ಸಿ.ಬಿಯ ಡೆಪ್ಯುಟಿ ಡೈರೆಕ್ಟರ್ ಕೆ.ಪಿ.ಎಸ್. ಮಲ್ಹೋತ್ರ ಇತ್ತೀಚೆಗೆ ಇದೊಂದು ಸುಳ್ಳುಸುದ್ದಿ ಎಂದು ಹೇಳಿದ್ದರು. ಎನ್.ಸಿ.ಬಿಯವರು ಅಂಥದ್ದೊಂದು ಪಟ್ಟಿಯನ್ನು ಸಿದ್ಧ ಮಾಡಿಲ್ಲ ಮತ್ತು ಸದ್ಯಕ್ಕೆ ಯಾರನ್ನೂ ಬಂಧಿಸುವ ಯೋಚನೆ ಇಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಅದಾಗಿ ಒಂದೇ ದಿನಕ್ಕೆ, ರಿಯಾ ಹೇಳಿದ ಹೆಸರುಗಳ ಪೈಕಿ ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಮತ್ತು ಫ್ಯಾಶನ್ ಡಿಸೈನರ್ ಸಿಮೋನ್ ಖಂಬತ್ತಾ ಅವರ ಹೆಸರುಗಳಿವೆ ಎಂದು ಎನ್.ಸಿ.ಬಿ ಹೇಳಿದೆ. ಆದರೆ, ಇದುವರೆಗೂ ಯಾರಿಗೂ ಈ ವಿಷಯವಾಗಿ ಸಮನ್ಸ್ ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
'ರಿಯಾ ಅವರನ್ನು ತನಿಖೆಗೆ ಒಳಪಡಿಸಿದಂತೆ ಒಂದಿಷ್ಟು ಹೆಸರುಗಳು ಸಿಕ್ಕಿವೆ. ಆದರೆ, ಇದುವರೆಗೂ ಯಾರಿಗೂ ಸಮನ್ಸ್ ಕಳಿಸಿಲ್ಲ. ಹಾಗೆಯೇ, ಬಾಲಿವುಡ್ನ ಯಾವ ಸ್ಟಾರ್ಗಳ ಪಟ್ಟಿಯನ್ನೂ ನಾವು ಸಿದ್ಧಪಡಿಸಿಲ್ಲ' ಎಂದು ಎನ್.ಸಿ.ಬಿಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಹೇಳಿದ್ದಾರೆ.