

ಚೆನ್ನೈ: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಬಗ್ಗೆ ಆಗಾಗ ಸುದ್ದಿ ಕೇಳಿಬರುತ್ತಲೇ ಇರುತ್ತದೆ ಮತ್ತು ಹಲವರು ನಟಿಯರು ಈ ಕಾಸ್ಟಿಂಗ್ ಕೌಚ್ಗೆ ಒಂದಲ್ಲ ಒಂದು ಬಾರಿ ತುತ್ತಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈಗ ನಟಿ ನಯನತಾರಾ ಸರದಿ.
ನಯನತಾರಾ ಸಹ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆಯಿಂದ ಬಳಲಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು, ಅಂಥದ್ದೊಂದು ಅವಕಾಶವನ್ನು ಧಿಕ್ಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಒಂದು ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಅದಕ್ಕೆ ಬದಲಿಯಾಗಿ ಚಿತ್ರತಂಡದವರು ನನ್ನಿಂದ ಬೇರೆ ಅಪೇಕ್ಷೆಯಲ್ಲಿದ್ದರು. ಆದರೆ, ನಾನು ಆ ಅವಕಾಶವನ್ನು ನಿರಾಕರಿಸಿದೆ. ಕಾರಣ, ನನಗೆ ನನ್ನ ಮೇಲೆ ನನಗೆ ನಂಬಿಕೆ ಇದೆ' ಎಂದು ನಯನತಾರಾ ಹೇಳಿದ್ದಾರೆ.
ಬರೀ ನಯನತಾರಾ ಒಬ್ಬರೇ ಅಲ್ಲ, ಇದುವರೆಗೂ ಹಲವು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಕೆಲವರಂತೂ ಅದರಿಂದಾಗಿಯೇ ತಾವು ಚಿತ್ರರಂಗದಿಂದ ದೂರವಾಗಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.