

| ಹರ್ಷವರ್ಧನ್ ಬ್ಯಾಡನೂರು
ನಟಿ ಹರ್ಷಿಕಾ ಪೂಣಚ್ಚಗೆ 2023 ಅದೃಷ್ಟದ ವರ್ಷವಾಗಿದೆ. ಅವರು ನಟಿಸಿರುವ ಸಾಲುಸಾಲು ಸಿನಿಮಾಗಳು ತೆರೆಗೆ ಬರಲು ರೆಡಿಯಿವೆ. 2019ರಲ್ಲಿ ‘ಉದ್ಘರ್ಷ’ ಹಾಗೂ 2021ರಲ್ಲಿ ‘ಹಮ್ ಹೈ ರಾಹಿ ಪ್ಯಾರ್ ಕೆ’ ಎಂಬ ಭೋಜಪುರಿ ಚಿತ್ರದ ಬಳಿಕ ಅವರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ ತಂದೆಯ ಅನಾರೋಗ್ಯದಿಂದಾಗಿ ಸುಮಾರು ಒಂದು ವರ್ಷ ಅವರು ನಟನೆಯಿಂದ ದೂರ ಉಳಿದಿದ್ದರು. ವಾಪಸ್ಸಾಗಬೇಕು ಎನ್ನುವಷ್ಟರಲ್ಲಿ ಕರೊನಾ ಎರಡು ವರ್ಷ ಬೆಂಬಿಡದೇ ಕಾಡಿತು. ಕರೊನಾ ಸಮಯದಲ್ಲಿ ಸಿನಿಮಾಗಳಿಂದ ದೂರಾದರೂ, ಭುವನಂ ಫೌಂಡೇಷನ್ ಮೂಲಕ ಸಮಾಜಮುಖಿ ಕೆಲಸಗಳಿಂದ ಜನರಿಗೆ ಹತ್ತಿರವಾಗಿದ್ದರು ಹರ್ಷಿಕಾ. ಅದಾಗುತ್ತಲೇ ಕಳೆದ ವರ್ಷ ಮತ್ತೆ ಚಿತ್ರೀಕರಣದಲ್ಲಿ ಬಿಜಿಯಾದ ಹರ್ಷಿಕಾ, ಇದೀಗ ಸಿನಿಮಾಗಳ ಬಿಡುಗಡೆ ಎದುರು ನೋಡುತ್ತಿದ್ದಾರೆ.
ಮುಂದಿನ ಚಿತ್ರಗಳ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿರುವ ಅವರು, ‘ಲಯಾ ಕೋಕಿಲಾ ನಿರ್ದೇಶನದ ಹಾರರ್ ಥ್ರಿಲ್ಲರ್ ‘ತಾಯ್ತ’ ಚಿತ್ರದಲ್ಲಿ ನಾನು ಖುಷಿ ಎಂಬ ಸ್ಟೂಡೆಂಟ್ ಪಾತ್ರದಲ್ಲಿ ನಟಿಸಿದ್ದೇನೆ. ಕಾಲೇಜ್ ವಿದ್ಯಾರ್ಥಿಗಳು ಟ್ರಿಪ್ ಪ್ಲಾನ್ ಮಾಡುತ್ತಾರೆ. ಪ್ರವಾಸಕ್ಕೆ ಹೋದಾಗ ಅವರು ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತೆ? ಯಾಕೆ? ಎಂಬುದೇ ಚಿತ್ರದ ಅಂಶ. ಕಥೆ ಸಾಗಿದಂತೆ ಗಂಭೀರವಾಗುತ್ತದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ. ಹಾಗಂತ ನೀವು ದೆವ್ವ, ಭೂತ ನಂಬುತ್ತೀರಾ? ಎಂದರೆ, ‘ಕೆಟ್ಟ ಜನರೂ ದೆವ್ವಗಳೇ. ನಾನು ದೆವ್ವಗಳನ್ನು ನಂಬುವುದಿಲ್ಲ. ಗುಡ್ ಎನರ್ಜಿ, ಬ್ಯಾಡ್ ಎನರ್ಜಿ ನಂಬುತ್ತೇನೆ’ ಎಂದು ನಗುತ್ತಾರೆ ಹರ್ಷಿಕಾ.
ಅವರು ನಟಿಸಿರುವ ಮತ್ತೊಂದು ಸಿನಿಮಾ ‘ಕಾಸಿನ ಸರ’ ಕೂಡ ಇದೇ ತಿಂಗಳು ತೆರೆಗೆ ಬರುವ ನಿರೀಕ್ಷೆಯಿದೆ. ‘ಮಾರಕಾಸ್ತ್ರ’, ‘ಹಗ್ಗ’, ರಾಘವೇಂದ್ರ ರಾಜಕುಮಾರ್ ಮಗಳ ಪಾತ್ರದಲ್ಲಿ ನಟಿಸಿರುವ ‘ಸ್ತಬ’, ‘ಸೂಪರಾ›ಗಿದೆ ಲೈಫು’, ‘ಕಟೆ’, ಸ್ವರಾಜ್ ಶೆಟ್ಟಿ ನಾಯಕನಾಗಿರುವ ವಿನು ಬಳಂಜ ನಿರ್ದೇಶನದ ಹೆಸರಿಡದ ಚಿತ್ರ, ‘ಕಾಳನಾಗಿಣಿ’ ... ಹೀಗೆ ಒಂಬತ್ತು ಕನ್ನಡ ಚಿತ್ರಗಳು, ‘ಸಜನ್ ರೇ ಝುೂಟ್ ಮತ್ ಬೋಲೋ’ ಮತ್ತು ‘ಸನಮ್ ಮೇರೆ ಹಮ್ರಾಜ್’ ಎಂಬ ಎರಡು ಭೋಜಪುರಿ ಹಾಗೂ ಮಲಯಾಳಂನಲ್ಲಿ ಒಂದು ಚಿತ್ರ ಬಿಡುಗಡೆಗೆ ರೆಡಿಯಿವೆ’ ಎಂದು ಮಾಹಿತಿ ನೀಡುತ್ತಾರೆ ಹರ್ಷಿಕಾ. ಆ ಮೂಲಕ ಈ ವರ್ಷ ಹರ್ಷಿಕಾ ನಟಿಸಿರುವ 12 ಚಿತ್ರಗಳು ತೆರೆಗೆ ಬರುವ ನಿರೀಕ್ಷೆಯಿದೆ. ಜತೆಗೆ ‘ಯೂ ಆರ್
ನೆಕ್ಸ್ಟ್’ ಎಂಬ ಕನ್ನಡ ವೆಬ್ ಸರಣಿಯಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭೋಜಪುರಿ ಚಿತ್ರರಂಗದಲ್ಲಿ ಹೆಚ್ಚು ಬಿಜಿಯಾಗಿದ್ದ ಅವರು, ‘ಎಲ್ಲರೂ ನನ್ನನ್ನು ಭೋಜಪುರಿ ಚಿತ್ರರಂಗಕ್ಕೆ ಹೋಗಿಬಿಟ್ಟರು ಅನ್ನುತ್ತಿದ್ದರು. ಆದರೆ, ನನಗೆ ಹೆಸರು ತಂದುಕೊಟ್ಟಿರುವುದು ಕನ್ನಡ ಚಿತ್ರರಂಗ. ಕರ್ನಾಟಕ ನನ್ನ ಮನೆ. ಎಂಟು ಭಾಷೆಗಳಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಿದ್ದೇನೆ. ಬಹುಶಃ ಆ ದಾಖಲೆ ಮಾಡಿರುವ ಏಕೈಕ ನಟಿ ನಾನೊಬ್ಬಳೇ ಅನ್ನಿಸುತ್ತದೆ. ಆದರೆ, ಯಾವುದೇ ಭಾಷೆಯಲ್ಲಿ ನಟಿಸಿದರೂ, ನಾನು ಕನ್ನಡತಿಯೇ ...’ ಎಂದು ಹೆಮ್ಮೆಯಿಂದ ನಗುತ್ತಾರೆ ಹರ್ಷಿಕಾ ಪೂಣಚ್ಚ.