ರಿಯಲ್​ ಎಸ್ಟೇಟ್​ ಹಗರಣದಲ್ಲಿ ನಯನತಾರಾ, ರಮ್ಯಾ ಕೃಷ್ಣನ್​, ಅಂಜಲಿ ತೆಂಡೂಲ್ಕರ್​ ಹೆಸರು: ಕೋಟಿಗಟ್ಟಲೇ ಹಣ ವಂಚನೆ!

Real Estate
Published on

ಹೈದರಾಬಾದ್​: ದಕ್ಷಿಣ ಭಾರತದ ಪ್ರಖ್ಯಾತ ನಟಿಯರಾದ ರಮ್ಯಾ ಕೃಷ್ಣನ್​ ಹಾಗೂ ನಯನತಾರಾ ಸೇರಿದಂತೆ ಸಿನಿಮಾ ಮತ್ತು ಕ್ರಿಕೆಟ್​ ಲೋಕದ ಕೆಲ ಮಂದಿ ರಿಯಲ್​ ಎಸ್ಟೇಟ್​ ಹಗರಣದಲ್ಲಿ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುಂಚೂಣಿಯಲ್ಲಿರುವ ರಿಯಲ್​ ಎಸ್ಟೇಟ್​ ಕಂಪನಿಯೊಂದು ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಪತ್ನಿ ಅಂಜಲಿ ಸೇರಿದಂತೆ ಭಾರತಾದ್ಯಂತ ಅನೇಕ ವಿವಿಐಪಿಗಳಿಗೆ ಸಮರ್ಪಕ ನೀರಿನ ಸೌಲಭ್ಯವುಳ್ಳ ಎಕರೆಗಟ್ಟಲೇ ಜಾಗವನ್ನು ಕೋಟಿಗಳಲ್ಲಿ ಮಾರಾಟ ಮಾಡಿದೆ.

ಮಾರಾಟವಾಗಿರುವ ಈ ಜಾಗದಲ್ಲಿ ಬಹು ಎತ್ತರದ ಅಪಾರ್ಟ್​ಮೆಂಟ್​ ಕಟ್ಟಡಗಳು ಹಾಗೂ ಗೇಟೆಡ್ ಸಮುದಾಯ (ವಸತಿ ಸಮುದಾಯ ರೂಪವಾಗಿದ್ದು, ಪಾದಚಾರಿಗಳು, ಬೈಸಿಕಲ್​ಗಳು ಮತ್ತು ವಾಹನಗಳಿಗೆ ಕಟ್ಟುನಿಟ್ಟಾಗಿ ನಿಯಂತ್ರಿತ ಪ್ರವೇಶದ್ವಾರಗಳನ್ನು ಹೊಂದಿರುತ್ತದೆ, ಮತ್ತು ಇದನ್ನು ಸಾಮಾನ್ಯವಾಗಿ ಗೋಡೆಗಳು ಮತ್ತು ಬೇಲಿಗಳ ಮುಚ್ಚಿದ ಪರಿಧಿಯಿಂದ ನಿರೂಪಿಸಲಾಗುತ್ತದೆ) ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು.

ಇದೀಗ ವ್ಯವಹಾರದ ಪಾಲುದಾರರ ನಡುವಿನ ಕಚ್ಚಾಟದಿಂದ ಮಾರಾಟವಾದ ಜಾಗ ಕೃಷಿ ಭೂಮಿಗೆ ಸಂಬಂಧಿಸಿದ್ದು ಮತ್ತು ಅಲ್ಲಿ ಕಟ್ಟಡ ನಿರ್ಮಿಸಲು ಸರ್ಕಾರದ ಅನುಮತಿ ಪಡೆದಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ಕಂಪನಿಯು ಕೃಷಿ ಭೂಮಿಯನ್ನು ಎಕರೆಗೆ ಒಂದು ಲಕ್ಷ ನೀಡಿ ಖರೀದಿಸಿದ್ದು, ಅದನ್ನು ಒಂದು ಎಕರೆಗೆ 10 ಕೋಟಿ ರೂ.ನಂತೆ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ.

ಇದೀಗ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಂಪನಿಗೆ ಕಂದಾಯ ಇಲಾಖೆ ನೋಟಿಸ್​ ನೀಡಿದೆ. ಮೂಲಗಳ ಪ್ರಕಾರ ನಯನತಾರಾ, ರಮ್ಯಾ ಕೃಷ್ಣನ್ ಮತ್ತು ಅಂಜಲಿ ತೆಂಡೂಲ್ಕರ್ ಸೇರಿದಂತೆ ಇತರರು ತಾವು ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯುತ್ತಾರೆಯೇ ಎಂಬುದು ಇದೀಗ ಪ್ರಶ್ನೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net