

Naxals killed: ಛತ್ತೀಸ್ಗಢದ ನಕ್ಸಲ್ ಪೀಡಿತ ಬಿಜಾಪುರ ಜಿಲ್ಲೆಯ ಬಸ್ತಾರ್ ವಿಭಾಗದಲ್ಲಿ ಪೊಲೀಸ್ ಮಾಹಿತಿದಾರನೆಂದು ಸಕ್ರಿಯ ಬಿಜೆಪಿ ಕಾರ್ಯಕರ್ತನನೊಬ್ಬನ್ನು ಕುತ್ತಿಗೆಗೆ ಹಗ್ಗ ಬಿಗಿದು ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಮಂಗಳವಾರ(ಅ. 14) ವರದಿಯಾಗಿದೆ.
ಸತ್ಯಂ ಪೂನೆಮ್ ಎಂದು ನಕ್ಸಲರಿಂದ ಹತನಾದ ಬಿಜೆಪಿ ಕಾರ್ಯಕರ್ತ. ಬಿಜಾಪುರ ಜಿಲ್ಲೆಯ ಇಲ್ಮಿಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಜಲ್ಕಂಕೇರ್ ಗ್ರಾಮದ ನಿವಾಸಿ. ಸಾಮಾನ್ಯ ಉಡುಪಿನಲ್ಲಿ ಬಂದ ಷೇಧಿತ ಮಾವೋವಾದಿ ಸಂಘಟನೆಯ ಮ್ಯಾಡೆಡ್ ಏರಿಯಾ ಸಮಿತಿಯ ಸದಸ್ಯರು ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಾರೆ. ಕೊಂದು ಒಂದು ಲೆಟರ್ ಬರೆದಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ನಕ್ಸಲರು ಬರೆದ ಪತ್ರದಲ್ಲಿ ಅವರು ಕೃತ್ಯದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಹತ್ಯೆಗೆ ಹಲವಾರು ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಮೃತ ವ್ಯಕ್ತಿಗೆ ಪೊಲೀಸ್ ಸಂಪರ್ಕಗಳಿವೆ ಎಂದು ಆರೋಪಿಸಲಾಗಿದೆ. ಹಲವಾರು ತಿಂಗಳುಗಳಿಂದ ಈ ವ್ಯಕ್ತಿ ನಮ್ಮ ಕಣ್ಗಾವಲಿನಲ್ಲಿದ್ದ, ಪೊಲೀಸ್ ಪಡೆಗಳೊಂದಿಗೆ ಸಹಕರಿಸುವುದನ್ನು ಮುಂದುವರೆಸಿದ್ದಕ್ಕಾಗಿ ಕೊಲೆ ಮಾಡಲಾಗಿದೆ. ಇದಕ್ಕೂ ಮುನ್ನ ಹಲವು ಬಾರಿ ಆತನಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಬರೆಯಲಾಗಿದೆ.
ಈ ಕುರಿತು ಬಿಜಾಪುರ ಎಸ್ಪಿ ಜಿತೇಂದ್ರ ಯಾದವ್ ಮಾತನಾಡಿದ್ದು, ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಸ್ಥಳಕ್ಕೆ ಭದ್ರತಾ ಪಡೆಗಳನ್ನು ಕಳುಹಿಸಲಾಗಿದೆ. ಮತ್ತು ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಹೇಳಿದ್ದಾರೆ.
ಪೊಲೀಸ್ ದಾಖಲೆಗಳ ಪ್ರಕಾರ, ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಸುಮಾರು 40 ಮಂದಿ ಮಾವೋವಾದಿ ಸಂಬಂಧಿತ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಜನವರಿ 2023 ರಿಂದ ಡಿಸೆಂಬರ್ 2024 ರ ನಡುವೆ ಬಿಜಾಪುರ, ಸುಕ್ಮಾ, ದಂತೇವಾಡ, ನಾರಾಯಣಪುರ, ಕಾಂಕೇರ್, ಕೊಂಡಗಾಂವ್ ಮತ್ತು ಬಸ್ತಾರ್ ಜಿಲ್ಲೆಗಳನ್ನು ಒಳಗೊಂಡಿರುವ ವಿಭಾಗದಾದ್ಯಂತ ಪ್ರತ್ಯೇಕ ಘಟನೆಗಳಲ್ಲಿ 11 ಬಿಜೆಪಿ ನಾಯಕರು ಹತ್ಯೆಗೀಡಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)