ಸಚಿನ್​​ ಅಲ್ಲ ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಈತನೇ ಶ್ರೇಷ್ಠ ಕ್ರಿಕೆಟಿಗ​: ಸಿಕ್ಸರ್​ ಸಿಧು ಅಚ್ಚರಿಯ ಹೇಳಿಕೆ

Sidhu
Published on

ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಕ್ರಿಕೆಟಿಗ ಯಾರು ಎಂಬ ಪ್ರಶ್ನೆ ಕೇಳಿದರೆ ಬಹುತೇಕರು ಸಚಿನ್ ತೆಂಡೂಲ್ಕರ್ ಹೆಸರನ್ನು ಹೇಳುತ್ತಾರೆ. ಸಚಿನ್​ ಅವರನ್ನು ಭಾರತೀಯ ಕ್ರಿಕೆಟ್ ದಂತಕತೆ ಎಂದು ಬಣ್ಣಿಸಲಾಗಿದೆ. ಎಲ್ಲರ ನೆಚ್ಚಿನ ಸಚಿನ್​ ಸುಮಾರು ಎರಡು ದಶಕಗಳ ಕಾಲ ವಿಶ್ವ ಕ್ರಿಕೆಟ್ ಅನ್ನು ಆಳಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಇನ್ನೂ ಅವರ ಹೆಸರಿನಲ್ಲೇ ಇದೆ.

ಬೇರೆ ಕ್ರಿಕೆಟಿಗರಿಗೆ ಭವಿಷ್ಯದಲ್ಲಿ ಸಚಿನ್​ ಅವರ ದಾಖಲೆಯನ್ನು ಮುರಿಯುವುದು ಕಷ್ಟವೆಂದೇ ಹೇಳಲಾಗಿದೆ. ಹಾಗೆಯೇ ಶತಕಗಳ ಲೆಕ್ಕದಲ್ಲಿ ಸಚಿನ್ ಅವರನ್ನು ಮೀರಿಸುವುದು ಕೂಡ ಸುಲಭವಲ್ಲ. ಆದರೆ, ಏಕದಿನ ಮಾದರಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಶತಕಗಳನ್ನು ಮೀರಿಸಿದ ಏಕೈಕ ವ್ಯಕ್ತಿ ಅಂದರೆ ಅದು ವಿರಾಟ್ ಕೊಹ್ಲಿ. ಅವರನ್ನು ಬಿಟ್ಟರೆ ಇನ್ಯಾವ ಕ್ರಿಕೆಟಿಗ ಸಚಿನ್​ ದಾಖಲೆ ಹತ್ತಿರ ಕೂಡ ಸುಳಿಯಲು ಸಹ ಸಾಧ್ಯವಾಗಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಕ್ರಿಕೆಟಿಗ ಎಂದು ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕೊಂಡಾಡಿದ್ದಾರೆ.

ಕೊಹ್ಲಿ ಓರ್ವ ಶ್ರೇಷ್ಠ ಕ್ರಿಕೆಟಿಗ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕೊಹ್ಲಿಗಿಂತ ಶ್ರೇಷ್ಠ ಕ್ರಿಕೆಟಿಗನನ್ನು ನಾನು ಇದುವರೆಗೂ ನೋಡಿಲ್ಲ ಎಂಬ ಸಿಧು ಅವರ ಕಾಮೆಂಟ್‌ಗಳು ಇದೀಗ ಚರ್ಚೆಯ ವಿಷಯವಾಗಿದೆ. ಸಿಧು ಅವರು ಇಲ್ಲಿ ಕೊಹ್ಲಿಯನ್ನು ಸಚಿನ್​ಗೆ ಹೋಲಿಕೆ ಮಾಡಿಲ್ಲ. ಆದರೆ, ಕೊಹ್ಲಿಯನ್ನು ಬೆಟ್ಟದಷ್ಟು ಕೊಂಡಾಡಿದ್ದಾರೆ. ಹೀಗಾಗಿ ಸಿಧು ಅವರ ಹೇಳಿಕೆಗೆ ಕೆಲವು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿರಾಟ್ ಕೊಹ್ಲಿಗಿಂತ ಸಚಿನ್ ಶ್ರೇಷ್ಠ ಕ್ರಿಕೆಟಿಗ ಎಂದು ಪ್ರತಿದಾಳಿ ನಡೆಸುತ್ತಿದ್ದಾರೆ.

ಅಂದಹಾಗೆ ಕೊಹ್ಲಿ ಅವರನ್ನು ಸಚಿನ್‌ಗೆ ಹೋಲಿಸುವುದು ಸೂಕ್ತವಲ್ಲ ಎಂದು ಕೊಹ್ಲಿಯೇ ಹಿಂದೊಮ್ಮೆ ಹೇಳಿದ್ದಾರೆ. ಅಲ್ಲದೆ, ಏಕದಿನ ಮಾದರಿ ಪಂದ್ಯಗಳಲ್ಲಿ ಸಚಿನ್​ ಶತಕ ದಾಖಲೆಯನ್ನು ಮುರಿದಾಗ ಕ್ರೀಡಾಂಗಣದಲ್ಲಿ ಸಚಿನ್​ ಮುಂದೆ ಕೊಹ್ಲಿ ತಲೆ ಬಾಗಿದ್ದನ್ನು ನಾವಿಲ್ಲಿ ಮರೆಯುವಂತಿಲ್ಲ.

ಸಚಿನ್ ಅವರು 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 15921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ, 6 ದ್ವಿಶತಕ ಹಾಗೂ 68 ಅರ್ಧ ಶತಕಗಳಿವೆ. ಅವರು 463 ಏಕದಿನ ಪಂದ್ಯಗಳಲ್ಲಿ 18426 ರನ್ ಗಳಿಸಿದ್ದಾರೆ. ಇದರಲ್ಲಿ 49 ಶತಕ, ಒಂದು ದ್ವಿಶತಕ ಹಾಗೂ 96 ಅರ್ಧ ಶತಕಗಳಿವೆ. ಇನ್ನು ವಿರಾಟ್ ಕೊಹ್ಲಿ ಅವರು 113 ಟೆಸ್ಟ್‌ಗಳಲ್ಲಿ 8848 ರನ್ ಗಳಿಸಿದ್ದಾರೆ. ಇದರಲ್ಲಿ 29 ಶತಕ, 7 ದ್ವಿಶತಕ ಹಾಗೂ 30 ಅರ್ಧ ಶತಕಗಳಿವೆ. ಕೊಹ್ಲಿ 292 ಏಕದಿನ ಪಂದ್ಯಗಳನ್ನಾಡಿದ್ದು, 13848 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಹಾಗೂ 72 ಅರ್ಧ ಶತಕಗಳಿವೆ. 125 ಟಿ20 ಪಂದ್ಯಗಳಲ್ಲಿ 4188 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳು ಸೇರಿವೆ.

ಕೊಹ್ಲಿಗಿಂತ ಸಚಿನ್ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದರು. ಸಚಿನ್​ರಂತೆ ಕೊಹ್ಲಿ ಅವರು ಅಷ್ಟು ದಿನ ಮುಂದುವರಿಯುವುದು ಕಷ್ಟ. ಸಚಿನ್ ಅವರಂತೆ 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳನ್ನು ಆಡುವುದು ಕಷ್ಟ. ಇದೀಗ ಕೊಹ್ಲಿ ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗ ಎಂಬ ನವಜೋತ್ ಸಿಂಗ್ ಸಿಧು ಅವರ ಕಾಮೆಂಟ್‌ಗಳ ಕುರಿತು ನಿಮ್ಮ ಅಭಿಪ್ರಾಯ ಏನೆಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net