ಹುಟ್ಟುವ ಮಗು ರೇಣುಕಾಸ್ವಾಮಿಯಂತಹ ತಂದೆ ಮುಖ ನೋಡದಿರುವುದೇ ಒಳಿತು! ದಚ್ಚು ಪರ ನಿಂತ ಬಿಗ್​ಬಾಸ್​ ಬ್ಯೂಟಿ

Darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​ ಬಗ್ಗೆ ರಾಜ್ಯಾದ್ಯಂತ ಪರ-ವಿರೋಧ ಚರ್ಚೆಯಾಗುತ್ತಿದೆ. ರಾಜ್ಯಾದ್ಯಂತ ದರ್ಶನ್​ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಕೆಲ ಅಭಿಮಾನಿಗಳು ಸೇರಿದಂತೆ ನಟ-ನಟಿಯರು ಕೂಡ ದರ್ಶನ್​ ಪರ ಧ್ವನಿ ಎತ್ತುತ್ತಿದ್ದಾರೆ.

ನಟಿ ಹಾಗೂ ಕಾಂಗ್ರೆಸ್​ ನಾಯಕಿ ಭಾವನ, ವಿಜೆ ಹೇಮಲತಾ, ತೆಲುಗು ನಟ ನಾಗಶೌರ್ಯ ಸೇರಿದಂತೆ ಅನೇಕರು ದರ್ಶನ್​ ಪರ ಬ್ಯಾಟ್​ ಬೀಸಿದ್ದಾರೆ. ಸಂಸದೆ ಸುಮಲತಾ ಕೂಡ ದಚ್ಚು ಪರ ಮಾತನಾಡಿದ್ದಾರೆ. ಇದೀಗ ಬಿಗ್​ಬಾಸ್​ ಸ್ಪರ್ಧಿ ಹಾಗೂ ನಟಿ ತನಿಷಾ ಕುಪ್ಪಂಡ ದರ್ಶನ್​ ಪರ ಮಾತನಾಡಿದ್ದು, ಕೊಲೆಯಾದ ರೇಣುಕಾಸ್ವಾಮಿ ವಿರುದ್ಧವೇ ಕಿಡಿಕಾರಿದ್ದಾರೆ.

ರೇಣುಕಾಸ್ವಾಮಿ ಪತ್ನಿ ಸಹನಾ ಸದ್ಯ ಗರ್ಭಿಣಿಯಾಗಿದ್ದು, ಹುಟ್ಟಿದ ಮಗು ನನ್ನ ತಂದೆ ಎಲ್ಲಿ ಎಂದು ಕೇಳಿದರೆ ನಾನು ಹೇಳಲಿ ಎಂದು ಮಾಧ್ಯಮಗಳ ಮುಂದೆ ಸಹನಾ ಕೇಳಿದ್ದರು. ನಾನು ಒಂದು ಮಾತನ್ನು ಹೇಳಲು ಬಯಸುತ್ತೇನೆ. ಆ ರೀತಿಯ ಗುಣ ಹೊಂದಿದ್ದ ತಂದೆಯ ಮುಖವನ್ನು ನೋಡದಿರುವುದೇ ಒಳ್ಳೆಯದು ಎಂದು ನನಗನಿಸುತ್ತದೆ. ಇಂದಿಗೂ ನಮ್ಮ ಸುತ್ತಮುತ್ತ ಇಂಥವರಿದ್ದಾರೆ. ಹೆಣ್ಣು ಮಕ್ಕಳಿಗೆ ಅದರಲ್ಲೂ ನಟಿಯರಿಗೆ ಅಶ್ಲೀಲವಾಗಿ ಮತ್ತು ಅಸಹ್ಯವಾಗಿ ಮೆಸೇಜ್​ ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಾವು ದೂರು ನೀಡಿದರು ಯಾವುದೇ ಪ್ರಯೋಜನ ಆಗುವುದಿಲ್ಲ ಮತ್ತು ನ್ಯಾಯವು ಸಿಗುವುದಿಲ್ಲ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ. ಈ ಮೂಲಕ ನಟ ದರ್ಶನ್​ ಅಂಡ್​ ಗ್ಯಾಂಗ್​ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಯುವತಿಯೊಬ್ಬಳು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಗ್ಯಾರಂಟಿ ನ್ಯೂಸ್​ ಜತೆ ಮಾತನಾಡಿರುವ ವಿಡಿಯೋ ತುಣುಕನ್ನು ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿರುವ ಸಂಬರಗಿ, ಈ ಹೆಣ್ಣು ಮಗುಗೆ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇಲ್ಲ. ಅದಕ್ಕಾಗಿಯೇ ನ್ಯಾಯ ಸಮ್ಮತವಾಗಿ ಮಾತನಾಡುತ್ತಿದೆ. ಆದರೆ, ನಿವೃತಿಯ ಅಂಚಿನಲ್ಲಿ ಇರುವ ಕೆಲ ಕನ್ನಡ ನಟಿಮಣಿಯರ ರೀತಿ ಅವಕಾಶ ಸಿಗಬಹುದಾ ಅಂತ ಜೊಲ್ಲು ಸುರಿಸಿ ಬಕೆಟ್ ಇಡಿಯುವ ದರ್ದ್ ಯಾರಿಗೂ ಇಲ್ಲ.

ನಟ ದರ್ಶನ್​ ಬಂಧನವಾದ ಯಾರೊಬ್ಬರು ಮಾತನಾಡಲಿಲ್ಲ. ಇದೀಗ ಈ ಪ್ರಕರಣದಲ್ಲಿ ದರ್ಶನ್​ ಜೈಲು ಸೇರಿದ ಬಳಿಕ ಒಬ್ಬೊಬ್ಬರೆ ದರ್ಶನ್​ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರು ದರ್ಶನ್​ ಪರ ಧ್ವನಿಗೂಡಿಸಿ ರೇಣುಕಾಸ್ವಾಮಿ ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಇನ್ನು ಕೆಲವರು ದರ್ಶನ್​ ವಿರುದ್ಧ ಕಿಡಿಕಾರುತ್ತಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಅದನ್ನು ಕಾನೂನಿ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಅಮಾನವೀಯವಾಗಿ ಸಾಯಿಸುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಸಹ ಜನರಲ್ಲಿ ಕೇಳಿಬರುತ್ತಿದೆ.

ಏನಿದು ಪ್ರಕರಣ? ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net