

ಉಪ್ಪಿನಂಗಡಿ: ಬಂಟ್ವಾಳ ತಾಲೂಕಿನ ದೇವಸ್ಯಮೂಡೂರು ಎಂಬಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ನವರಾತ್ರಿಯ ಈ ಸಮಯದಲ್ಲಿ ವೇಷ ಧರಿಸಿ ಭವತಿ ಭಿಕ್ಷಾಂದೇಹಿ ಎಂದು ನಿಧಿ ಸಂಗ್ರಹಿಸಲು ಮುಂದಾಗಿ ಗಮನ ಸೆಳೆದಿದ್ದಾರೆ.
ಶಾಲೆಯ ಮೂಲ ಅವಶ್ಯಕತೆಗಳನ್ನು ಪೂರೈಸುವಲ್ಲಿ ದೊರೆಯಬೇಕಾದಲ್ಲಿಂದ ಸಹಕಾರ ದೊರೆಯದಿರುವುದರಿಂದ 70 ವರ್ಷಗಳ ಇತಿಹಾಸ ಹೊಂದಿರುವ ಈ ಸರ್ಕಾರಿ ಶಾಲೆಯನ್ನು ಉಳಿಸಬೇಕು ಎಂಬ ಧ್ಯೇಯದಿಂದ ಶಾಲಾಭಿವೃದ್ಧಿಯ ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ಊರಿನ ವಿದ್ಯಾಭಿಮಾನಿಗಳು ಭವತಿ ಭಿಕ್ಷಾಂದೇಹಿ ವಿದ್ಯಾ ದೇಗುಲ ಸೇವಾ ಯೋಜನೆಯ ಹೆಸರಲ್ಲಿ ನಿಧಿ ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದಾರೆ.
ನವರಾತ್ರಿಯ ವೇಷ ಧರಿಸಿ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನಾದ್ಯಂತ ಸಂಚರಿಸಿ ನಿಧಿ ಸಂಗ್ರಹ ಅಭಿಯಾನ ಪ್ರಾರಂಭಿಸಿದ್ದಾರೆ. ಎಸ್ಡಿಎಂಸಿಯ ಅಧ್ಯಕ್ಷ ವಸಂತ ಮುದಿಮಾರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶವಂತ ಕೆ., ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಹರೀಶ್ ಸ್ವತಃ ವೇಷ ಧರಿಸಿ ಸಂಚಾರ ಕೈಗೊಂಡಿದ್ದಾರೆ. ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ನವರಾತ್ರಿಯ ಸಂದರ್ಭವನ್ನು ಬಳಸಿಕೊಂಡ ಅವರ ನಡೆ ಶ್ಲಾಘನೆಗೆ ಒಳಗಾಗಿದೆ.
ಗುರುವಾರ ಚಾಲನೆ ಪಡೆದ ಈ ನಿಧಿ ಸಂಗ್ರಹ ಅಭಿಯಾನದ ವೇಷಧಾರಿ ಸಂಚಾರದ ಚಾಲನಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕಿ ಹರಿಣಾಕ್ಷಿ, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಪ್ರಮೀಳಾ, ಪ್ರಮುಖರಾದ ಸೀತಾರಾಮ್ ಉಪಸ್ಥಿತರಿದ್ದರು.