

ನವದೆಹಲಿ: ಮಹಾಮಾರಿ ಕೋವಿಡ್ನಿಂದ ಅನೇಕ ಜನರಲ್ಲಿ ಉಂಟಾಗಿರುವ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ನ್ಯಾಷನಲ್ ಟೆಲಿಮೆಂಟಲ್ ಹೆಲ್ತ್ ಕೇರ್ ಸೆಂಟರ್‌ಗಳನ್ನು ಸ್ಥಾಪಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ವಿತ್ತ ಸಚಿವೆಯಾಗಿ ನಾಲ್ಕನೇ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್, ಕೋವಿಡ್ ಬಿಕ್ಕಟ್ಟು ಸೃಷ್ಟಿಸಿರುವ ಮಾನಸಿಕ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದರು. ಕೋವಿಡ್ ಸಾಂಕ್ರಮಿಕವು ಎಲ್ಲ ವಯೋಮಾನದವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಉತ್ತಮ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಾಗಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಪ್ರೊಗ್ರಾಮ್ ಅನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ನಿಮ್ಹಾನ್ಸ್ ನೋಡಲ್ ಸೆಂಟರ್ ಆಗಿರುವ 23 ಟೆಲಿ ಮೆಂಟಲ್ ಹೆಲ್ತ್ ಸೆಂಟರ್‌ಗಳ ನೆಟ್‌ವರ್ಕ್ ಅನ್ನು ಒಳಗೊಂಡಿರುತ್ತದೆ ಮತ್ತು ಐಐಐಟಿ ಬೆಂಗಳೂರು ತಂತ್ರಜ್ಞಾನವು ಈ ಕಾರ್ಯಕ್ರಮಕ್ಕೆ ಬೆಂಬಲವನ್ನು ಒದಗಿಸುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಮುಕ್ತ ವೇದಿಕೆಯನ್ನು ಹೊರತರಲಾಗುವುದು. ಇದು ಆರೋಗ್ಯ ಪೂರೈಕೆದಾರರ ಡಿಜಿಟಲ್ ದಾಖಲಾತಿಗಳು ಮತ್ತು ಆರೋಗ್ಯ ಸೌಲಭ್ಯಗಳು, ಅನನ್ಯ ಆರೋಗ್ಯ ಗುರುತು ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಇದು ಒಳಗೊಂಡಿರುತ್ತದೆ ಎಂದು ಸೀತಾರಾಮನ್ ತಿಳಿಸಿದರು. (ಏಜೆನ್ಸೀಸ್)