ಬೆಳ್ತಂಗಡಿ: ಎಲ್ಲ ಭಾಷೆಗಳಿಗೆ ಮೂಲವಾಗಿರುವ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಘೋಷಿಸಬೇಕು ಎಂದು ಉಜಿರೆ ಎಸ್ .ಡಿ.ಎಂ. ಕಾಲೇಜಿನ ಶೈಕ್ಷಣಿಕ ಸಂಯೋಜಕ ಶಶಿಶೇಖರ ಎನ್.ಕಾಕತ್ಕರ್ ಹೇಳಿದರು.
ಸೋಮವಾರ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಸಂಸ್ಕೃತಾಧ್ಯಯನಾನುಸಂಧಾನ ವಿಭಾಗದ ವತಿಯಿಂದ ಆಯೋಜಿಸಲಾದ ಸಂಸ್ಕೃತನಾಟಕಾನಾಂ ಸಮೀಕ್ಷಣಮ್ ಎಂಬ ರಾಷ್ಟ್ರಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಸೇತು ಹಿಮಾಲಯ ಪರ್ಯಾಂತ ಇರುವ ಭಾರತೀಯ ಭಾಷೆಗಳಿಗೆ ಸಂಸ್ಕೃತವೇ ಮೂಲ. ಸಂಸಕ್ಕತ ಗೊತ್ತಿದ್ದರೆ ಎಲ್ಲಿಯೂ ಜೀವನ ಮಾಡಬಹುದು. ಹೀಗಾಗಿ ಸಂಸ್ಕೃತವು ರಾಷ್ಟ್ರೀಯ ಭಾಷೆಯಾಗಬೇಕು. ಸಂಸ್ಕೃತ ನಾಟಕಗಳು ದರ್ಶನ, ತತ್ವ, ಮನೋರಂಜನೆಯ ಮಿಶ್ರಣವಾಗಿದೆ. ಎಲ್ಲ ನಾಟಕಗಳೂ ಸುಖಾಂತ್ಯವಾಗುವುದು ವಿಶೇಷ ಎಂದರು.
ಆಂಧ್ರಪ್ರದೇಶದ ಋಷಿವಾಟಿಕಾ ಗುರುಕುಲದ ಆಚಾರ್ಯೆ ಗಾಯತ್ರೀ ಭಾರಧ್ವಾಜ್ ಸಂಸ್ಕೃತ ಶಿಕ್ಷಣದ ಬಗ್ಗೆ ಮಾತನಾಡಿದರು. ಕಾಲೇಜಿನ ಸಂಸ್ಕೃತ ಅಧ್ಯಾಪಕ ಡಾ.ಪ್ರಸನ್ನಕುಮಾರ ಐತಾಳ ಅಧ್ಯಕ್ಷತೆ ವಹಿಸಿದ್ದರು.
ಕಾರವಾರದ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಡಾ.ವೆಂಕಟೇಶ ಎಂ.ಗಿರಿ ಸಂಸ್ಕೃತ ರೂಪಕ ಲಕ್ಷಣ ಗ್ರಂಥಾನಾಮ್ ಏಕಂ ಸಮೀಕ್ಷಣಮ್ ಹಾಗೂ ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿ.ವಿ.ಯ ಪ್ರಾಚಾರ್ಯ ಡಾ.ವೆಂಕಟರಮಣ ಭಟ್ಟ ಭರತಸ್ಯ ನಾಟ್ಯಶಾಸ್ತ್ರ ದಿಶಾ ಸಂಸ್ಕೃತ ನಾಟಕಾನಾಂ ಪರಿಶೀಲನಮ್ ಎಂಬ ವಿಷಯದ ಮೇಲೆ ವಿಚಾರಗೋಷ್ಠಿ ನಡೆಸಿದರು. ಕಾರ್ಯಕ್ರಮ ಸಂಯೋಜಕ ಶ್ರೇಯಸ್ ಪಾಳಂದ್ಯೆ ಉಪಸ್ಥಿತರಿದ್ದರು.
ಬಳಿಕ ಶೃಂಗೇರಿ ಸಂಸ್ಕೃತ ವಿ.ವಿ.ಯ ವಿದ್ಯಾರ್ಥಿಗಳು ವಾಸಂತಿಕಾ ಸ್ವಪ್ನಮ್ ಎಂಬ ನಾಟಕ ಪ್ರದರ್ಶಿಸಿದರು. ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎನ್.ಭಟ್ಟ ಸ್ವಾಗತಿಸಿದರು. ಆತ್ಮಶ್ರೀ ವಂದಿಸಿದರು. ಧರಿತ್ರಿ ಭಿಡೆ ಹಾಗೂ ಸಿಂಚನಾ ಪಾಳಂದೆ ಕಾರ್ಯಕ್ರಮ ನಿರೂಪಿಸಿದರು.
ಮಹಾದ್ವಾರದ ಶಿಖರ ಪ್ರತಿಷ್ಠಾಪನೆ : ಮಧೂರು ಕ್ಷೇತ್ರ ಶ್ರೀದೇವರ ನಡೆಯಲ್ಲಿ ಕಲಶ ಇರಿಸಿ ಪ್ರಾರ್ಥನೆ