ಮಹಾದ್ವಾರದ ಶಿಖರ ಪ್ರತಿಷ್ಠಾಪನೆ : ಮಧೂರು ಕ್ಷೇತ್ರ ಶ್ರೀದೇವರ ನಡೆಯಲ್ಲಿ ಕಲಶ ಇರಿಸಿ ಪ್ರಾರ್ಥನೆ

New Project (9)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಸಜ್ಜುಗೊಂಡಿರುವ ಕಾಸರಗೋಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಕಳಶಪ್ರಾಯವಾಗಿರುವ ಶಿಲಾಮಯ ಮಹಾದ್ವಾರದ ಶಿಖರ ಪ್ರತಿಷ್ಠಾಪನೆ ಮತ್ತು ಶಿಖರ ಅಭಿಷೇಕ ಕಾರ್ಯಕ್ರಮ ಸೋಮವಾರ ಜರುಗಿತು.

ದೇರೆಬೈಲು ಡಾ.ಶಿವಪ್ರಸಾದ ತಂತ್ರಿ ನೇತೃತ್ವ ಹಾಗೂ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಶಿಲಾಮಯ ಮಹಾದ್ವಾರದ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ದೇವಸ್ಥಾನದ ಪವಿತ್ರಪಾಣಿ ರತನ್‌ಕುಮಾರ್ ಕಾಮಡ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ರವೀಶ ತಂತ್ರಿ ಕುಂಟಾರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಟಿ. ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಕಲಶಪೂಜೆ, ವಾಸ್ತುಪೂಜೆ, ವಾಸ್ತು ಹೋಮ ನಡೆಯಿತು. ಶ್ರೀದೇವರ ನಡೆಯಲ್ಲಿ ಕಲಶ ಇರಿಸಿ ಪ್ರಾರ್ಥನೆ ನಡೆಸಿದ ನಂತರ ಶಿಖರ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ನಾಳೆ ಉದ್ಘಾಟನೆ

ದಾನಿ ಮುಂಬೈ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರ ಕೊಡುಗೆಯಾಗಿ ಮಹಾದ್ವಾರ ನಿರ್ಮಿಸಲಾಗಿದೆ. ಮಹಾದ್ವಾರ ಮತ್ತು ರಾಜಾಂಗಣದ ಉದ್ಘಾಟನೆ ಮಾ.26ರಂದು ಬೆಳಗ್ಗೆ 10ಕ್ಕೆ ಜರುಗಲಿದೆ. ಒಂದೂವರೆ ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ದ್ರಾವಿಡ ಶೈಲಿಯ ಮಹಾದ್ವಾರ ನಿರ್ಮಿಸಲಾಗಿದೆ. ಕೇಂದ್ರ ಸಚಿವ ಸುರೇಶ್‌ಗೋಪಿ ಮಹಾದ್ವಾರ ಲೋಕಾರ್ಪಣೆಗೊಳಿಸುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net