

ಕಳೆದ ಶುಕ್ರವಾರ (ಸೆ. 23) ರಾಷ್ಟ್ರೀಯ ಸಿನಿಮಾ ದಿನ ಆಚರಿಸಲಾಯಿತು. ಅದರ ಅಂಗವಾಗಿ ದೇಶದಾದ್ಯಂತ ಆ ದಿನ ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ 75 ರೂ.ಗೆ ಟಿಕೆಟ್ ವಿತರಿಸಲಾಯಿತು. ಬಹುತೇಕ ಎಲ್ಲೆಡೆ ಮಲ್ಟಿಪ್ಲೆಕ್ಸ್ಗಳು ಹೌಸ್ಫುಲ್ ಆಗಿದ್ದವು. ಆ ಬಳಿಕ ಶನಿವಾರ ಮತ್ತು ಭಾನುವಾರ ಹಳೆಯ ದರದಲ್ಲೇ ಸಿನಿಮಾಗಳು ಪ್ರದರ್ಶನವಾಗಿದ್ದು, ಈಗ ಜನರನ್ನು ಮತ್ತೆ ತಮ್ಮತ್ತ ಸೆಳೆಯಲು ಮಲ್ಟಿಪ್ಲೆಕ್ಸ್ಗಳು ಮುಂದಾಗಿವೆ. ಹೀಗಾಗಿಯೇ ಇಂದಿನಿಂದ ಗುರುವಾರದವರೆಗೆ ನಾಲ್ಕು ದಿನಗಳ ಕಾಲ ಮತ್ತೆ ಕಡಿಮೆ ದರದಲ್ಲಿ ಸಿನಿಮಾ ಪ್ರದರ್ಶನ ಮಾಡುತ್ತಿವೆ.
ಹಾಗಂತ ರಾಷ್ಟ್ರೀಯ ಸಿನಿಮಾ ದಿನದಂದು ಸಿಕ್ಕಂತೆ 75 ರೂ.ಗೆ ಟಿಕೆಟ್ ದರ ನಿಗದಿಪಡಿಸಿಲ್ಲ. ಬದಲಾಗಿ 99 ರೂ.ನಿಂದ 150 ರೂ.ವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ. ಮಲ್ಟಿಪ್ಲೆಕ್ಸ್ಗಳ ಈ ನಿರ್ಧಾರಕ್ಕೆ ನಿರ್ವಪಕರೂ ಕೈಜೋಡಿಸಿದ್ದು, ದರ ಕಡಿಮೆಯಾದರೂ, ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾದರೆ ಒಳ್ಳೆಯದೇ ಎಂದು ಒಮ್ಮತದ ನಿರ್ಧಾರ ಮಾಡಿದ್ದಾರೆ. ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳ ಚಿತ್ರಗಳಿಗೆ ಹೋಲಿಸಿದರೆ ಹಿಂದಿ, ಇಂಗ್ಲೀಷ್ ಸಿನಿಮಾ ಟಿಕೆಟ್ ದರ ಹೆಚ್ಚು. ಆದರೆ, ಈಗ ನಾಲ್ಕು ದಿನಗಳ ಕಾಲ ಎಲ್ಲ ಭಾಷೆಗಳ ಚಿತ್ರಗಳ ದರವೂ ಹೆಚ್ಚು ಕಡಿಮೆ ಒಂದೇ ರೀತಿ ಇರಲಿವೆ.
ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ 112 ರೂ.ಯಿಂದ ಟಿಕೆಟ್ ದರ ಪ್ರಾರಂಭವಾಗಲಿದ್ದು, ಕಾರ್ನಿವಲ್ ಸಿನಿಮಾಸ್ನಲ್ಲಿ ಕೆಲವೆಡೆ 75 ರೂ. ಹಾಗೂ 100 ರೂ.ನಿಂದ ಟಿಕೆಟ್ ದರ ಪ್ರಾರಂಭವಾಗಲಿವೆ. ಸಿನಿಪೊಲಿಸ್ ಮತ್ತು ಪಿವಿಆರ್ ಸಿನಿಮಾಸ್ನಲ್ಲೂ 100 ರೂ. ಹಾಗೂ120 ರೂ.ನಿಂದ ಟಿಕೆಟ್ ಖರೀದಿಸಿ ಸಿನಿಮಾಗಳನ್ನು ನೋಡಬಹುದಾಗಿದೆ. ಈ ಬೆಳವಣಿಗೆಯಿಂದ ಈಗಾಗಲೇ ಆನ್ಲೈನ್ ಬುಕ್ಕಿಂಗ್ ಚುರುಕುಗೊಂಡಿದ್ದು, ಹಲವೆಡೆ ಸೋಮವಾರದ ಶೋಗಳು ಭರ್ಜರಿಯಾಗಿ ಭರ್ತಿಯಾಗುತ್ತಿವೆ. ಬಾಲಿವುಡ್ನ ‘ಬ್ರಹ್ಮಾಸ್ತ್ರ’ ಕಳೆದ ವಾರ ಬಿಡುಡೆಯಾದ ಕನ್ನಡದ ‘ಗುರು ಶಿಷ್ಯರು’, ಹಿಂದಿಯ ‘ಚುಪ್’ ಹಾಗೂ ತೆಲುಗಿನ ‘ಅಲ್ಲೂರಿ’, ‘ಕೃಷ್ಣ ವೃಂದ ವಿಹಾರಿ’ ಸೇರಿದಂತೆ ಹಲವು ಚಿತ್ರಗಳು ವಾರದ ಮೊದಲ ದಿನವೂ ಹೌಸ್ಫುಲ್ ಆಗುವ ಸಾಧ್ಯತೆಯಿದೆ. -ಏಜೆನ್ಸೀಸ್