

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದು, ಗುರುವಾರ (ಜುಲೈ 18) ಇಬ್ಬರು ವಿಚ್ಛೇದನವನ್ನು ಖಚಿತಪಡಿಸಿದ್ದಾರೆ. ಡಿವೋರ್ಸ್ ಅಧಿಕೃತವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ಪತ್ನಿ ನತಾಶಾಗೆ ಎಷ್ಟು ಜೀವನಾಂಶ ನೀಡಿದ್ದಾರೆ? ಇಬ್ಬರ ಒಬ್ಬನೇ ಮಗ ಅಗಸ್ತ್ಯ ಯಾರ ಸುಪರ್ದಿಗೆ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಟೀಮ್ ಇಂಡಿಯಾ ಕ್ರಿಕೆಟಿಗನಾಗಿ ಹಾರ್ದಿಕ್ ಪಾಂಡ್ಯ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ. ಅಲ್ಲದೆ, ಸ್ಟಾರ್ ಕ್ರಿಕೆಟಿಗನೆಂಬ ಜನಪ್ರಿಯತೆಯೊಂದಿಗೆ ಹಾರ್ದಿಕ್ ಪಾಂಡ್ಯ ಅನೇಕ ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕವೂ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ಪ್ರತಿ ಜಾಹೀರಾತಿಗೆ ಕೋಟ್ಯಂತರ ಹಣ ಪಡೆಯುತ್ತಾರೆ. ಒಟ್ಟಾರೆ, ಹಾರ್ದಿಕ್ ಪಾಂಡ್ಯ ಅವರು 91 ರಿಂದ 100 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಪಾಂಡ್ಯ ಅವರು ತನ್ನ ಮಾಜಿ ಪತ್ನಿ ನತಾಶಾಗೆ ಜೀವನಾಂಶ ಪಾವತಿಸಿದರೆ, ಅವರ ಆಸ್ತಿಯಲ್ಲಿ ಭಾರಿ ಇಳಿಕೆಯಾಗಲಿದೆ.
ನತಾಶಾ ವಿಚಾರಕ್ಕೆ ಬರುವುದಾದರೆ, ಹಾರ್ದಿಕ್ ಪಾಂಡ್ಯನನ್ನು ಮದುವೆಯಾಗುವ ಮುನ್ನ ಮಾಡೆಲ್ ಆಗಿದ್ದರು. ಸರ್ಬಿಯಾ ದೇಶದ ನತಾಶಾ ಕೂಡ ಅಪಾರ ಆಸ್ತಿ ಹೊಂದಿದ್ದಾರೆ. ಆಕೆಯ ನಿವ್ವಳ ಆಸ್ತಿ ಮೌಲ್ಯವು 20 ರಿಂದ 25 ಕೋಟಿ ರೂ. ಇದೆ. ಒಂದು ವೇಳೆ ಹಾರ್ದಿಕ್ ಪಾಂಡ್ಯರಿಂದ ಜೀವನಾಂಶ ಪಡೆದರೆ, ಆಕೆಯ ನಿವ್ವಳ ಮೌಲ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ. 20 ರಿಂದ 70 ಕೋಟಿ ರೂ. ಆಸ್ತಿಯ ಒಡತಿಯಾಗುವ ಸಾಧ್ಯತೆ ಇದೆ. ಆದರೆ, ಜೀವನಾಂಶ ಕೇಳಿದ್ದಾರಾ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.
ಇನ್ನು ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದಾರಂತೆ. ಹೀಗಾಗಿ ಜೀವನಾಂಶ ಸಿಗದೇ ಇದ್ದರೂ ನತಾಶಾ ಸ್ವಂತವಾಗಿ ಸಂಪಾದಿಸಿದ 20 ಕೋಟಿ ರೂ.ಗಳ ನಿವ್ವಳ ಆಸ್ತಿಯಿಂದಲೂ ಉತ್ತಮ ಜೀವನ ನಡೆಸಬಹುದು. ಪಾಂಡ್ಯ-ನತಾಶಾ ಅವರ ಮಗ ಅಗಸ್ತ್ಯ ಪ್ರಸ್ತುತ ತನ್ನ ತಾಯಿಯೊಂದಿಗೆ ಇರಲಿದ್ದಾನೆ.
ಡಿವೋರ್ಸ್ ಬಗ್ಗೆ ಪಾಂಡ್ಯ ಹೇಳಿದ್ದೇನು?
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, ನಾಲ್ಕು ವರ್ಷಗಳ ಜೊತೆ ಪಯಣ ಇಂದು ಅಂತ್ಯಗೊಂಡಿದೆ. ವೈವಾಹಿಕ ಬದುಕಿನಲ್ಲಿ ಯಾವುದೇ ಬಿರುಕು ಬರದಂತೆ ತಡೆಯಲು ಸಾಕಷ್ಟು ಪ್ರಯತ್ನಪಟ್ಟೆವು. ಆದರೆ ಅದು ಸಾಧ್ಯವಾಗದಿದ್ದಾಗ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡುತ್ತಿದ್ದೇವೆ. ಇದು ಕಠಿಣ ನಿರ್ಧಾರವಾಗಿದ್ದು, ನಮ್ಮ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ದುಃಖದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಮತ್ತು ಜನರಿಗೆ ಮನವಿ ಮಾಡಿದ್ದಾರೆ.
ನಾವು ಅಗಸ್ತ್ಯನನ್ನು ಪಡೆದಿದ್ದೇವೆ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ನಮ್ಮಿಂದ ಸಾಧ್ಯವಾದ ಎಲ್ಲವನ್ನೂ ನೀಡುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಹಾರ್ದಿಕ್ ಮನವಿ ಮಾಡಿದ್ದಾರೆ. (ಏಜೆನ್ಸೀಸ್)