

ನಾಸಿಕ್: ಲಾಕ್ಡೌನ್ ನಿಯಮ ಪಾಲಿಸಿ ಎಂದು ಎಲ್ಲರೂ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ನಿಯಮ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳಂತೂ ನಿಲ್ಲುತ್ತಿಲ್ಲ. ಇದೀಗ ಹಲವು ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಕೇಳುವವರೇ ಇಲ್ಲದಂತಾಗಿದೆ ಎಂಬುದು ಪೊಲೀಸರ ಅಳಲು.
ಇದರ ನಡುವೆಯೂ ಹಲವರು ಕಟ್ಟುನಿಟ್ಟಾಗಿ ಲಾಕ್ಡೌನ್ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅಂಥವರ ಬಗ್ಗೆ ಪೊಲೀಸರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅಂಥದ್ದರಲ್ಲಿ ಮನೆಯಲ್ಲಿಯೇ ಮದುವೆಯಾದವರಿಗೆ ಪೊಲೀಸರಿಂದ ಭರ್ಜರಿ ಆಫರ್ ಇಲ್ಲಿದೆ.
ಮಹಾರಾಷ್ಟ್ರ ನಾಸಿಕ್ನ ಪೊಲೀಸರು ಇಂಥ ಜೋಡಿಗೆ ವಿನೂತನವಾಗಿ ಶುಭಾಶಯ ಕೋರಿದ್ದು ಭಾರಿ ಪ್ರಶಂಸೆಗೆ ಕಾರಣವಾಗಿದೆ.
ನಾಸಿಕ್ನ ಅಪಾರ್ಟ್ಮೆಂಟ್ವೊಂದರಲ್ಲಿ ಜೋಡಿಯೊಂದು ಮನೆಯಲ್ಲಿಯೇ ಮದುವೆ ಮಾಡಿಕೊಂಡು ಲಾಕ್ಡೌನ್ನ ಎಲ್ಲ ನಿಯಮಗಳನ್ನು ಪಾಲಿಸಿತ್ತು. ಈ ವಿಷಯ ಅರಿವಿಗೆ ಬರುತ್ತಿದ್ದಂತೆ ಸ್ಥಳೀಯ ಪೊಲೀಸರು ಅವರಿಗೆ ವಿಭಿನ್ನವಾಗಿ ಶುಭಾಶಯ ಕೋರಲು ಮುಂದಾದರು.
ಪೊಲೀಸ್ ಗಸ್ತು ವಾಹನಗಳೊಂದಿಗೆ ಅಪಾರ್ಟ್ಮೆಂಟ್ ಮುಂದಿನ ರಸ್ತೆಯಲ್ಲಿ ನಿಂತ ಪೊಲೀಸ್ ಸಿಬ್ಬಂದಿ ವಾಹನದಲ್ಲಿ ಮೈಕ್ನಲ್ಲಿ ಮುಬಾರಕ್ ಹೋ ತುಮ್ಕೋ ಯೇ ಶಾದಿ ತುಮ್ಹಾರಿ... ಹಾಡನ್ನು ನುಡಿಸಿದ್ದಾರೆ. ಬಳಿಕ ಹಾಡಿಗೆ ಚಪ್ಪಾಳೆ ತಟ್ಟುತ್ತ ನವಜೋಡಿಗೆ ಶುಭಾಶಯ ಕೋರಿದ್ದಾರೆ. ಜತೆಗೆ, ಕೆಲ ಜನರೂ ಕೂಡ ಪೊಲೀಸರಿಗೆ ಸಾಥ್ ನೀಡಿದ್ದಾರೆ.
ಪೊಲೀಸರಿಂದ ದೊರೆತ ಈ ಉಡುಗೊರೆ ನವವಿವಾಹಿತರನ್ನು ಭಾವುಕರನ್ನಾಗಿಸಿದೆ. ಅವರೂ ಕೂಡ ಚಪ್ಪಾಲೆ ತಟ್ಟುತ್ತ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹೃದಯಸ್ಪರ್ಶಿ ಸನ್ನಿವೇಶದ ವಿಡಿಯೋವನ್ನು ಮಹಾರಾಷ್ಟ್ರ ಸಿಎಂ ಕಚೇರಿ ಕೂಡ ಶೇರ್ ಮಾಡಿದೆ.
ಅದರ ಲಿಂಕ್ ಇಲ್ಲಿದೆ ನೋಡಿ....