

ಬೆಂಗಳೂರು: ಕೇಂದ್ರ ಸರ್ಕಾರವು “ನಶಾಮುಕ್ತ ಭಾರತ ಅಭಿಯಾನ” ಯೋಜನೆಯನ್ನು ದೇಶಾದ್ಯಂತ ಆಗಸ್ಟ್ 15ರಿಂದ ಜಾರಿಗೆ ತರಲಿದೆ. ಮಾದಕ ವಸ್ತು ಸೇವನೆ-ಬಳಕೆಯ ಹಾವಳಿ ತಡೆಗಟ್ಟಲು ದೇಶದಲ್ಲಿ 258 ಜಿಲ್ಲೆಗಳನ್ನು ಆಯ್ಕೆ ಮಾಡಿ ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು, ಕೊಡಗು, ಕೋಲಾರ, ಮೈಸೂರು, ರಾಮನಗರ, ಉಡುಪಿ ಜಿಲ್ಲೆಗಳು ಈ ಯೋಜನೆಯಡಿಯಲ್ಲಿ ಆಯ್ಕೆಯಾಗಿವೆ.
ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಯೋಜನಾ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅದರನ್ವಯ ರಾಜ್ಯಮಟ್ಟದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿಯನ್ನು ಮತ್ತು ಸಂಬಂಧಪಟ್ಟ 6 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ರಚಿಸಲಾಗಿದೆ.
ಅದರಂತೆ ರಾಜ್ಯಮಟ್ಟದಲ್ಲಿ “ನಶಾ ಮುಕ್ತ ಭಾರತ ಅಭಿಯಾನ” ಸಮಿತಿಯನ್ನು ರಚಿಸಿದ್ದು ಈ ಸಮಿತಿಯು ರಾಜ್ಯದಲ್ಲಿ ಈ ಅಭಿಯಾನದ ಅನುಷ್ಠಾನ ಹಾಗೂ 6 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುವ ಈ ಯೋಜನೆಯ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನ ನೀಡುವ ಕಾರ್ಯನಿರ್ವಹಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.