ನಂದಿಕೂರು ಶಾಲೆ ಉನ್ನತೀಕರಿಸಿ ಆದೇಶ

Published on

ಪಡುಬಿದ್ರಿ: ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ನಂದಿಕೂರು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 8ನೇ ತರಗತಿವರೆಗೆ ಉನ್ನತೀಕರಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಶತವಾನ ಕಂಡಿರುವ ನಂದಿಕೂರು ಶಾಲೆಯಲ್ಲಿ ಈವರೆಗೆ 1ರಿಂದ 7ನೇ ತರಗತಿವರೆಗೆ ಕಲಿಸಲಾಗುತ್ತಿದೆ.

ಮಕ್ಕಳ ಕೊರತೆ ಕಾಣುತಿದ್ದ ಶಾಲೆ ಶತವಾನೋತ್ಸವ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ನಂದಿಕೂರು ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ ಎಲ್‌ಕೆಜಿಯಿಂದ ಆಂಗ್ಲ ವಾಧ್ಯಮ ಆರಂಭಿಸಲಾಗಿತ್ತು. ಪ್ರಸ್ತುತ 1ರಿಂದ 7ನೇ ತರಗತಿಯವರೆಗೆ 290 ಮಕ್ಕಳು ಇದ್ದಾರೆ.

ಮೂಲಸೌಕರ್ಯದೊಂದಿಗೆ ಉತ್ತಮ ಶಿಕ್ಷಕ ಸಿಬ್ಬಂದಿ ಹೊಂದಿರುವ ಶಾಲೆಯನ್ನು ಉನ್ನತೀಕರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ 8ನೇ ತರಗತಿವರೆಗೆ ಉನ್ನತೀಕರಿಸಲು ಸರ್ಕಾರ ಮಂಜೂರಾತಿ ನೀಡಿ ಆದೇಶಿಸಿದೆ. ಜತೆಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ವಲಯದ ನಂಚಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬ್ರಹ್ಮಾವರ ವಲಯದ ಆಲಡ್ಕ (ನೂಜಿ) ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಿಸಿ ಸರ್ಕಾರ ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net