

ಕಾರ್ಕಳ: ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಾಯಕತ್ವ ನೀಡಿದಾಗ ಮುಂದೆ ಸಮಾಜದಲ್ಲಿ ಉತ್ತಮ ನಾಯಕನಾಗಲು ಸಾಧ್ಯ. ಇಂತಹ ನಾಯಕತ್ವ ಗುಣವನ್ನು ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಈ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡಾಗ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯ ಎಂದು ರೆ.ಫಾ.ಪೌಲ್ ಕುಟಿನ್ಹ ಹೇಳಿದರು.
ಕಾರ್ಕಳ ಕ್ರೈಸ್ಟ್‌ಕಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಹಿರಿಯ ಪ್ರಾಥಮಿಕ ಶಾಲೆಯ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಜ್ಞಾನ, ಕೌಶಲ್ಯ, ಆರೋಗ್ಯ ಹಾಗೂ ಮೌಲ್ಯಗಳೆಂಬ ನಾಲ್ಕು ಅಂಶಗಳನ್ನು ಒಬ್ಬ ವಿದ್ಯಾರ್ಥಿ ತನ್ನಲ್ಲಿ ಅಳವಡಿಸಿಕೊಂಡಾಗ ಆತ ತನ್ನ ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದರು.
ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರು ಪ್ರತಿಯೊಬ್ಬರಿಗೂ ಒಂದೇ ರೀತಿಯ ಪ್ರತಿಭೆ ನೀಡಿರುವುದಿಲ್ಲ ಆದರೆ ಒಂದೇ ರೀತಿಯ ಅವಕಾಶವನ್ನು ನೀಡಿರುತ್ತಾನೆ. ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಂಡು ಬದುಕಿನಲ್ಲಿ ಯಶಸ್ಸು ಸಾಧಿಸಿ ಎಂದರು.
ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ದನ ಇಡ್ಯ, ಕಾರ್ಕಳ ಜೆಸಿಐ ಅಧ್ಯಕ್ಷೆ ಶ್ವೇತಾ ಜೈನ್, ಸಮಾಲೋಚಕಿ ಡಾ.ಸಿಸ್ಟರ್ ಶಾರ್ಲೆಟ್ ಸಿಕ್ವೇರಾ, ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ವಿಭಾಗದ ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷ ಪ್ರಕಾಶ್ ಡಿಸೋಜ, ಪ್ರಾಥಮಿಕ ವಿಭಾಗದ ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷೆ ಲಿನೆಟ್ ಮರೀನಾ ಡಿಸೋಜ ಹಾಗೂ ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು.
ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಪ್ರಸ್ತಾವಿಸಿದರು. ಪ್ರೌಢಶಾಲಾ ವಿಭಾಗದ ಶಾಲಾ ನಾಯಕ ಪಾರ್ಥಿವ್ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಶಾಲಾ ನಾಯಕಿ ಸಿಯೋನಾ ಲೋಬೋ ವಂದಿಸಿದರು. ವಿದ್ಯಾರ್ಥಿನಿಯರಾದ ಆಯೆಷಾ ರುಬಾ ಮತ್ತು ಲೆನಿಶಾ ಡಿಸೋಜ ನಿರೂಪಿಸಿದರು.