ದೀದಿಯ ಭದ್ರತಾ ಅಧಿಕಾರಿಯನ್ನು ಅಮಾನತು ಮಾಡಿದ ಕೇಂದ್ರ ಚುನಾವಣಾ ಆಯೋಗ

mamata2
mamata
Published on

ಕಲ್ಕತ್ತ: ಚುನಾವಣಾ ಪ್ರಚಾರದ ವೇಳೆ ಗಾಯಗೊಂಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತೆಯ ಉಸ್ತುವಾರಿ ಹೊತ್ತಿದ್ದ ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ ಅವರನ್ನು ಕೇಂದ್ರ ಚುನಾವಣಾ ಆಯೋಗ ಅಮಾನತು ಮಾಡಿ ಆದೇಶಿಸಿದೆ.

ಸೋಮವಾರ ಮಧ್ಯಾಹ್ನದ ವೇಳೆಗೆ ವಿವೇಕ್ ಸಹಾಯ ಅವರ ಸ್ಥಾನಕ್ಕೆ ಬೇರೊಬ್ಬ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ತಾಕೀತು ಮಾಡಿದೆ.

ಇದಲ್ಲದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸರಿಯಾದ ಭದ್ರತೆಯನ್ನು ನಿಯೋಜನೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಮೇದಿನಿಪುರ ಎಸ್​ಪಿ ಪ್ರವೀಣ್ ಪ್ರಕಾಶ್ ಅವರನ್ನೂ ಅಮಾನತಿನಲ್ಲಿಡಲಾಗಿದೆ.

ಮಾ 10 ರಂದು ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಕಾಲಿಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸತತ 48 ಗಂಟೆಗಳ ಚಿಕಿತ್ಸೆಯ ನಂತರ ಇದೀಗ ದೀದಿ ಅವರ ನಿವಾಸಕ್ಕೆ ವಾಪಾಸಾಗಿದ್ದಾರೆ.

ಮಮತಾ ಅವರು ಬುಧವಾರದಂದು ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಗಾಯಾಳುವಾದರು. ನಾಲ್ಕೈದು ಜನರು ತಮ್ಮ ಮೇಲೆ ದಾಳಿ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದರು. ಆದರೆ ಘಟನೆಯ ಸ್ಥಳದಲ್ಲಿದ್ದ ಸಾರ್ವಜನಿಕರು ಅದನ್ನು ಆಕಸ್ಮಿಕ ಘಟನೆ ಎಂದು ವಿವರಿಸಿದ್ದಾರೆ. ಕಾರಿನ ಬಾಗಿಲ ಹೊಡೆತದಿಂದಲೇ ಅವರ ಕಾಲು ಮುರಿದಿದ್ದಾಗಿ ಜನರು ತಿಳಿಸಿದ್ದಾರೆ.

ಬುಧವಾರ ಸಂಜೆಯೇ ಮಮತಾ ಅವರನ್ನು ಕೋಲ್ಕತದ ಎಸ್​ಎಸ್​ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿದ್ದುಕೊಂಡೇ ದೀದಿ ತಮ್ಮ ಕಾರ್ಯಕರ್ತರಿಗೆ ಶಾಂತವಾಗಿರಲು ವಿಡಿಯೋ ಸಂದೇಶ ಹರಿಬಿಟ್ಟಿದ್ದರು. ಮಮತಾ ಅವರ ಆರೋಗ್ಯ ಸ್ಥಿರವಾಗಿದೆ, 48 ತಾಸುಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇಟ್ಟುಕೊಳ್ಳಲಿದ್ದೇವೆ ಎಂದು ವೈದ್ಯರು ತಿಳಿಸಿದ್ದರು. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಇನ್ನು ಒಂದು ವಾರದಲ್ಲಿ ಅವರ ಆರೋಗ್ಯ ಇನ್ನಷ್ಟು ಸುಧಾರಿಸುವುದಾಗಿ ವೈದ್ಯರು ತಿಳಿಸಿದ್ದಾರೆ. ವೀಲ್​ ಚೇರ್​ನಲ್ಲಿ ಕುಳಿತೇ ಪ್ರಚಾರ ಮಾಡುವ ಪಣವನ್ನು ದೀದಿ ತೊಟ್ಟಿದ್ದಾರೆ. (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net