ನಾಡಿದ್ದು ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಇರುವುದಿಲ್ಲ: ಬಿಎಂಆರ್​ಸಿಎಲ್

Namma Metro
Published on

ಬೆಂಗಳೂರು: ರಾಜಧಾನಿಯಲ್ಲಿ ಪ್ರಮುಖ ಸಾರ್ವಜನಿಕ ಸಾರಿಗೆ ಸಂಸ್ಥೆ ಆಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​​ಸಿಎಲ್) ಪ್ರಕಟಣೆಯೊಂದನ್ನು ಹೊರಡಿಸಿದ್ದು, ನಾಡಿದ್ದು ನಿರ್ದಿಷ್ಟ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಇರದಿರುವುದರ ಕುರಿತು ಮಾಹಿತಿ ನೀಡಿದೆ.

ಬೈಯಪ್ಪನಹಳ್ಳಿ ಮತ್ತು ಕೆ.ಆರ್​.ಪುರಂ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಶಾಸನಬದ್ಧ ಸುರಕ್ಷತಾ ಪರಿಶೀಲನೆಯನ್ನು ನಡೆಸಲಿರುವುದರ ಹಿನ್ನೆಲೆಯಲ್ಲಿ ಸೆ. 21ರಂದು ಕೆಲವು ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಇಲ್ಲದಿರುವುದನ್ನು ಅದು ಗಮನಕ್ಕೆ ತಂದಿದೆ.

ಕೃಷ್ಣರಾಜಪುರ ಮತ್ತು ಗರುಡಾಚಾರ್ ಪಾಳ್ಯ ನಡುವೆ ಸೆ. 21ರಂದು ಪೂರ್ಣ ದಿನ ಹಾಗೂ ಬೈಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ರೈಲು ನಿಲ್ದಾಣದವರೆಗೆ ಮಧ್ಯಾಹ್ನ 1.30ರಿಂದ ಸಂಜೆ 4.30ರ ವರೆಗೆ ಮೆಟ್ರೋ ರೈಲು ಸಂಚಾರ ಇರುವುದಿಲ್ಲ ಎಂದು ಬಿಎಂಆರ್​ಸಿಎಲ್ ಹೇಳಿದೆ.

ಅದಾಗ್ಯೂ ವೈಟ್​ಫೀಲ್ಡ್(ಕಾಡುಗೋಡಿ) ಮತ್ತು ಗರುಡಾಚಾರ್ ಪಾಳ್ಯ ಮಾರ್ಗದಲ್ಲಿ ಪೂರ್ಣ ದಿನ, ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30ರಿಂದ 4.30ರ ವರೆಗೆ ರೈಲು ಸಂಚಾರ ಇರುತ್ತದೆ ಎಂದು ಅದು ಹೇಳಿದೆ.

ಮಧ್ಯಾಹ್ನ 1.3ರ ವರೆಗೆ ಮತ್ತು ಸಂಜೆ 4.30ರ ನಂತರ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ರಾತ್ರಿ 11ರವರೆಗೂ ಎಂದಿನಂತೆ ರೈಲು ಸಂಚಾರ ಇರಲಿದೆ. ಅಲ್ಲದೆ, ಹಸಿರು ಮಾರ್ಗದ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದೂ ಬಿಎಂಆರ್​​ಸಿಎಲ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net