ನಮ್ಮ ಮೆಟ್ರೋದಲ್ಲಿ ಗೋಬಿ ತಿಂದವನಿಗೆ 500 ರೂ. ದಂಡ!; ಮೆಟ್ರೋದಲ್ಲಿ ಯಾಕೆ ಆಹಾರ ಸೇವನೆ ಮಾಡಬಾರದು....

namm metro
Published on

ಬೆಂಗಳೂರು: ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಗೋಬಿ ಮಂಚೂರಿಯನ್ನು ಸೇವಿಸಿದ ವ್ಯಕ್ತಿಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು 500 ರೂ. ದಂಡ ವಿಧಿಸಿದ್ದಾರೆ. ಈ ಘಟನೆ ಬೆಂಗಳೂರಿನ ಮೆಟ್ರೋದಲ್ಲಿ ನಡೆದಿದೆ.

ಜಯನಗರದಲ್ಲಿನ ಪ್ರತಿಷ್ಠಿತ ಆಭರಣ ಮಳಿಗೆ ಉದ್ಯೋಗಿ ಸುನೀಲ್‌ಕುಮಾರ್‌‌ ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸುವುದನ್ನು ಆತನ ಸ್ನೇಹಿತರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.  ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ  ಅಧಿಕಾರಿಗಳು ಕ್ರಮ ಕೈ ಗೊಂಡಿದ್ದಾರೆ.

ಪ್ರತಿದಿನ ಸಂಪಿಗೆ ಮೆಟ್ರೋ ರೋಡ್ ಮೆಟ್ರೋ ನಿಲ್ದಾಣದಿಂದಲೇ ಪ್ರಯಾಣಿಸುತ್ತಿದ್ದ ಸುನೀಲ್, ಎಂದಿನಂತೆ ನಿಲ್ದಾಣಕ್ಕೆ ಬಂದಾಗ  ಅಧಿಕಾರಿಗಳು ಭದ್ರತಾ ಸಿಬ್ಬಂದಿ ಮೂಲಕ ಆತನನ್ನು ತಡೆದಿದ್ದಾರೆ. ಬಳಿಕ ಆತನನ್ನು ತರಾಟೆಗೆ ತೆಗೆದುಕೊಂಡು 500 ರೂ ದಂಡ ವಿಧಿಸಿ ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು ಮುಂದೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ಮಾತನಾಡಿ, ನಿಯಮಾವಳಿ ಪ್ರಕಾರ ಮೆಟ್ರೋ ಒಳಗೆ ಹಾಗೂ ಪ್ಲಾಟ್ ಫಾರ್ಮ್ ನಲ್ಲಿ ಆಹಾರವನ್ನು ಸೇವನೆ ಮಾಡುವಂತಿಲ್ಲ. ಇದನ್ನು ಮೀರಿದ್ದರಿಂದ ದಂಡ ವಿಧಿಸಲಾಗಿದೆ ಎಂದಿದ್ದಾರೆ.

ಮೆಟ್ರೋದಲ್ಲಿ ಯಾಕೆ ಆಹಾರ ಸೇವನೆ ಮಾಡಬಾರದು: ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಬಿಎಂಆರ್‌ಸಿಎಲ್‌ ಈ ನಿಯಮವನ್ನು ಜಾರಿಗೆ ತಂದಿದೆ.  ಮೆಟ್ರೋ ರೈಲುಗಳಲ್ಲಿ ತಿನ್ನುವುದು ಮತ್ತು ಪಾನೀಯಗಳನ್ನು ಕುಡಿಯುವುದು ಮೆಟ್ರೋ ಕಾಯ್ದೆಯಡಿ ಶಿಕ್ಷರ್ಹ ಅಪರಾಧವಾಗಿದೆ. ಏಕೆಂದರೆ ಸಹ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತದೆ. ಈ ಅಪರಾಧಗಳ ಅಡಿಯಲ್ಲಿ 500 ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ. ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಡಿಜಿಟಲ್​ ಪರದೆ ಮೇಲೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಆಹಾರ ಮತ್ತು ಪಾನೀಯ ಸೇವಿಸುವುದನ್ನು ತಡೆಯಲು ಹಾಗೂ ಕಸ ಬೀಸಾಡುವುದನ್ನು ತಡೆಯಲು ಪ್ರಾರಂಭದಿಂದಲೂ ಎಲ್​​ಸಿಡಿ ಮೇಲೆ ಜಾಗೃತಿ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net