

ಚಿತ್ರದುರ್ಗ: ನಟ ದರ್ಶನ್ ಮತ್ತು ಗ್ಯಾಂಗ್ನಿಂದ ಭೀಕರವಾಗಿ ಹತ್ಯೆಗೀಡಾಗಿದ್ದ ಚಿತ್ರದುರ್ಗ ಮೂಲದ ರೇಣುಕಸ್ವಾಮಿ (Renukaswamy) ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ರೇಣುಕಸ್ವಾಮಿ ಪುತ್ರನ ನಾಮಕರಣ ಶಾಸ್ತ್ರವನ್ನು ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ನೆರೆವೇರಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿರುವ ರೇಣುಕಸ್ವಾಮಿ ಅವರ ಮನೆಯಲ್ಲೇ ನಾಮಕರಣ ಶಾಸ್ತ್ರ ನೆರವೇರಿದ್ದು, ತಂದೆ ಕಾಶಿನಾಥ್ ಶಿವನಗೌಡ ಹಾಗೂ ತಾಯಿ ರತ್ನಪ್ರಭ ಮೊಮ್ಮಗನನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ರೇಣುಕಸ್ವಾಮಿ ಅವರ ಸಹೋದರಿ ನಾಮಕರಣ ಶಾಸ್ತ್ರವನ್ನು ನೆರವೇರಿಸಿದ್ದಾರೆ.
ರೇಣುಕಸ್ವಾಮಿ ಪುತ್ರನಿಗೆ ಶಶಿಧರ್ ಸ್ವಾಮಿ ಎಂದು ನಾಮಕರಣ ಮಾಡಲಾಗಿದ್ದು, ಜಂಗಮ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ನೆರವೇರಿಸಲಾಗಿದೆ. ಮೊಮ್ಮಗ ಶಶಿಧರ್ ಸ್ವಾಮಿ ಕೈ ಬೆರಳಿಗೆ ಉಂಗುರ ಹಾಕಿ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ ಸಂಭ್ರಮಿಸಿದರು. ಮಗುವನ್ನು ತೊಟ್ಟಿಲಿಗೆ ಹಾಕಿ ತೊಟ್ಟಿಲು ಶಾಸ್ತ್ರ ನೆರೆವೇರಿಸಿದ್ದು, ಕಾರ್ಯಕ್ರಮದಲ್ಲಿ ಬಂಧು ಮಿತ್ರರು ಭಾಗಿಯಾಗಿದ್ದರು.
2024ರ ಜೂನ್ ತಿಂಗಳಲ್ಲಿ ರೇಣುಕಾಸ್ವಾಮಿ ಬರ್ಬರ ಹತ್ಯೆಯಾಗಿ ಸಾವನ್ನಪ್ಪಿದ್ದು, ದರ್ಶನ್ ಸೇರಿ 17 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. 8 ತಿಂಗಳ ಈ ಕಹಿ ಘಟನೆಗಳೆಲ್ಲಾ ಕಳೆದ ಮೇಲೆ ಚಿತ್ರದುರ್ಗ ನಗರದ VRS ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ರೇಣುಕಾಸ್ವಾಮಿ ಮಗನ ನಾಮಕರಣ ಶಾಸ್ತ್ರವನ್ನು ನೆರವೇರಿಸಲಾಗಿದೆ.