ತೆಲಂಗಾಣದಿಂದ ಬಂತೊಂದು ಹಾರರ್​ ಸುದ್ದಿ: ಹೈದರಾಬಾದ್​ನ ಸುರಂಗ ಮಾರ್ಗದೊಳಗೆ ಪತ್ತೆಯಾಯಿತು ಮಹಿಳೆಯೊಬ್ಬರ ವಿಕಾರಗೊಂಡಿರುವ ಬೆತ್ತಲೆ ಮೃತದೇಹ!

Murder-1
Published on

ಹೈದರಾಬಾದ್​: ಬೆನ್ನಹುರಿಯಲ್ಲೇ ನಡುಕ ಹುಟ್ಟಿಸುವಂತಹ ಭಯಾನಕ ದೃಶ್ಯ ಹೈದರಾಬಾದ್​​ನ ತಂಗೆಡುಪಳ್ಳಿ-ವಿಕಾರಾಬಾದ್​ ರಸ್ತೆಯಲ್ಲಿರುವ ಸುರಂಗ ಮಾರ್ಗದೊಳಗೆ ಸೋಮವಾರ ರಾತ್ರಿ ಕಂಡುಬಂದಿತ್ತು. ಅಲ್ಲಿನ ಜನ ಬೆಚ್ಚಿಬಿದ್ದಿದ್ದರು. ಅಲ್ಲಿತ್ತು ಒಬ್ಬ ಮಹಿಳೆಯ ಬೆತ್ತಲೆ ಮೃತದೇಹ. ಮುಖವನ್ನು ಜಜ್ಜಿ ಹಾಕಿದ್ದು, ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಆ ಮೃತದೇಹ.

ಯಾರೋ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು, ಮೃತದೇಹವನ್ನು ಸುರಂಗ ಮಾರ್ಗದಲ್ಲಿ ಎಸೆದು ಹೋಗಿದ್ದಾರೆ. ಮುಖ ಜಜ್ಜಿ ಹೋಗಿರುವ ಕಾರಣ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಶಂಶಾಬಾದ್​​ನ ಡಿಸಿಪಿ ಎನ್​.ಪ್ರಕಾಶ್ ರೆಡ್ಡಿ ಅವರು ಹೇಳಿರುವ ಪ್ರಕಾರ, ಮೃತ ಮಹಿಳೆಯ ವಯಸ್ಸು 25-30 ಇರಬಹುದು ಎಂದು ಅಂದಾಜಿಸಲಾಗಿದೆ. ಕೈಗಳು ಕಟ್ಟಿಹಾಕಿದ ಸ್ಥಿತಿಯಲ್ಲಿದ್ದವು. ಚಿನ್ನದ ಉಂಗುರ ಮತ್ತು ಸರ ಮೃತದೇಹದ ಮೇಲೆಯೇ ಇತ್ತು. ಆದರೆ, ಬಳೆಗಳು ಅಲ್ಲೇ ಹತ್ತಿರ ಬಿದ್ದಿದ್ದವು.

ತಂಗೆಡುಪಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಮೂತ್ರವಿಸರ್ಜನೆಗೆಂದು ಸುರಂಗ ಮಾರ್ಗದ ಬಳಿ ಹೋದಾಗ ಮೃತದೇಹ ಪತ್ತೆಯಾಗಿದೆ. ಪೊಲೀಸರಿಗೆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೋಗಿ ಮಹಜರು ಮುಗಿಸಿದ್ದಾರೆ. ಮೃತದೇಹದ ಪೋಸ್ಟ್​ಮಾರ್ಟಂ ವರದಿ ಬಂದ ನಂತರವೇ ಅತ್ಯಾಚಾರ ಎಸಗಲ್ಪಟ್ಟಿದೆಯೇ ಇಲ್ಲವೇ ಎಂಬುದು ಗೊತ್ತಾದೀತು. ಸದ್ಯ ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ಧಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net