

ಗಂಗೊಳ್ಳಿ: ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಪೈಗಳಹಿತ್ಲು ನಾಗಬನದಲ್ಲಿ ಹಾಲಿಟ್ಟು ಸೇವೆ ಹಾಗೂ ಏಕಪವಿತ್ರ ನಾಗಮಂಡಲೋತ್ಸವ ಮಂಗಳವಾರ ಜರುಗಿತು.
ನಾಗಮಂಡಲೋತ್ಸವ ಪ್ರಯುಕ್ತ ಸೋಮವಾರ ಸರ್ಪಸಂಸ್ಕಾರ, ಸಮಾಪ್ತ್ಯಂಗ ತಿಲಹೋಮ, ಸರ್ವಪ್ರಾಯಶ್ಚಿತ್ತ ತಿಲಹೋಮ, ಬ್ರಾಹ್ಮಣ ವಟು ಆರಾಧನೆ, ಆಚಾರ್ಯ ಪೂಜೆ, ದಂಪತಿ ಪೂಜೆ, ರಾತ್ರಿ ಸರ್ವಪ್ರಾಯಶ್ಚಿತ್ತ ಆಶ್ಲೇಷಾ ಬಲಿ, ರಕ್ಷೋಘ್ನ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮಂಗಳವಾರ ಪಣ್ಣಾಳಿಕೇರ ಗಣಪತಿ ಯಾಗ, ಕಲಾತತ್ತ್ವ ಪುರಸ್ಸರ ಪ್ರಧಾನ ಅಧಿವಾಸ ಹೋಮ, ಚತುರ್ವೇದ ಪಾರಾಯಣ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಸಂದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಹಾಲಿಟ್ಟು ಸೇವೆ, ರಾತ್ರಿ ಏಕಪವಿತ್ರ ನಾಗಮಂಡಲೋತ್ಸವ ನಡೆಯಿತು. ಶ್ರೀಧರ ಮಂಜರು ಹಿಲ್ಕೋಡು ಮತ್ತು ಶಂಕರನಾರಾಯಣ ಬಾರಿ ಬೀಜಾಡಿ ನಾಗಪಾತ್ರಿಗಳಾಗಿ ಹಾಗೂ ಗೋಳಿಯಂಗಡಿ ವಾಸುದೇವ ವೈದ್ಯ ಹಾಗೂ ಸಂಗಡಿಗರು ವೈದ್ಯರಾಗಿ ನಾಗಮಂಡಲೋತ್ಸವ ಸಂಪನ್ನಗೊಳಿಸಿದರು.
ರೂಪಾ ಮತ್ತು ರಾಜೇಶ ಪೈ ಉಪ್ಪುಂದ ದಂಪತಿ ನೇತೃತ್ವದಲ್ಲಿ ಶ್ರೀಶ ಅಡಿಗ ಹೊಸಾಡು ಪೌರೋಹಿತ್ಯದಲ್ಲಿ ನಾಗಮಂಡಲೋತ್ಸವ ಕಾರ್ಯಕ್ರಮ ನಡೆಯಿತು. ಕುಲಪುರೋಹಿತ ಹರೀಶ್ ಭಟ್ ಉಪ್ಪುಂದ, ಪ್ರಧಾನ ಅರ್ಚಕ ರಾಮಚಂದ್ರ ನಾವಡ ಅರಾಟೆ, ಉಮೇಶ ಪೈ ಉಪ್ಪುಂದ, ಸತೀಶ ಪೈ ಉಪ್ಪುಂದ, ಅರ್ಚಕರು, ಪುರೋಹಿತರು, ಅರಾಟೆ ಪೈ ಕುಟುಂಬಸ್ಥರು, ಸೇವಾದಾರ ಕುಟುಂಬಸ್ಥರು, ಅರಾಟೆ ಗ್ರಾಮಸ್ಥರು, ಭಕ್ತರು ಉಪಸ್ಥಿತರಿದ್ದರು.