

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಬೆಣ್ಗೇರೆ ಶ್ರೀ ನಾಗ ದೇವಸ್ಥಾನದಲ್ಲಿ ನಾಗಮಂಡಲೋತ್ಸವದ ಸುವರ್ಣ ಮಹೋತ್ಸವ ಪ್ರಯುಕ್ತ ಅಷ್ಟ ಪವಿತ್ರ ನಾಗಮಂಡಲೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ಸಂಪನ್ನಗೊಂಡಿತು.
ಪ್ರಧಾನ ತಂತ್ರಿ ಬಲರಾಮ ಸೋಮಯಾಜಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಅಡಿಗ ನಾಯಕವಾಡಿ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಪೂಜೆ ಮೂಲಕ ಅಷ್ಟಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡಿತು. ಚತುರ್ವೇದ ಪಾರಾಯಣ, ಬ್ರಹ್ಮಕಲಶ ಸ್ಥಾಪನೆ, ಆಯುತ ಸಂಖ್ಯಾ ತಿಲಹೋಮ, ಕಲ್ಪೋಕ್ತ ಮಹಾಪೂಜೆ, ನಾಗದೇವರ ಸಂದರ್ಶನ, ಪಲ್ಲಪೂಜೆ, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ವಿ.ಮೇಸ್ತ, ಪ್ರಮುಖರಾದ ಮಡಿಕಲ್ ಸುರೇಶ ಖಾರ್ವಿ, ರಾಘವೇಂದ್ರ ವಿ.ಮೇಸ್ತ, ದೇವಳದ ಸೇವಾ ಸಮಿತಿ ಸದಸ್ಯರು, ಸಾರ್ವಜನಿಕ ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ನಾಗಶ್ರೀ ಮಹಿಳಾ ಮಂಡಳಿ ಸದಸ್ಯರು, ವಿವಿಧ ಸಮಾಜದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.