ಖೋ ಖೋ ವಿಶ್ವಕಪ್​ ಗೆದ್ದ ಸಂಭ್ರಮದಲ್ಲಿ ಬಿ. ಚೈತ್ರಾ; ಗ್ರಾಮೀಣ ಪ್ರತಿಭೆ ಹುಟ್ಟೂರಿನಲ್ಲಿ ಹಬ್ಬದ ವಾತಾವರಣ | B Chaitra

ವಿಜಯವಾಣಿ - 2025-01-20T162542.070
Published on

ಮೈಸೂರು: ನಿನ್ನೆಯಷ್ಟೇ ಖೋ ಖೋ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 78-40 ಅಂತರದಲ್ಲಿ ಮಣಿಸಿದ ಭಾರತ ಮಹಿಳಾ ತಂಡಕ್ಕೆ ದೇಶವ್ಯಾಪಿ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಫೈನಲ್ ಹಣಾಹಣಿಯಲ್ಲಿ ಐದು ನಿಮಿಷಗಳ ಕಾಲ 'ಡ್ರೀಮ್​ ರನ್​' ಓಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ಯದ ಮೈಸೂರಿನ ಯುವತಿ ಬಿ. ಚೈತ್ರಾಗೆ (B Chaitra) ಭಾರತೀಯರಿಂದ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಒಂದು ಪುಟ್ಟ ಗ್ರಾಮದ ಪ್ರತಿಭೆ ಬಿ. ಚೈತ್ರಾ, ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಲ್ಲದೇ, ಅತ್ಯಂತ ಗಮನಾರ್ಹ ಪ್ರದರ್ಶನ ನೀಡಿದ್ದು ನೋಡುಗರ ಗಮನಸೆಳೆದಿದೆ. ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಓರ್ವ ರೈತನ ಮಗಳು ಇಡೀ ದೇಶವೇ ಕೊಂಡಾಡುವಂತ ಸಾಧನೆಗೈದಿರುವುದು ಗ್ರಾಮಸ್ಥರ ಅದ್ಧೂರಿ ಸಂಭ್ರಮಾಚರಣೆಗೆ ಕಾರಣವಾಗಿದೆ. ಚೊಚ್ಚಲ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಇತಿಹಾಸ ನಿರ್ಮಿಸಿದ ಚೈತ್ರಾಗೆ ತವರೂರಿನಲ್ಲಿ ಭವ್ಯ ಸ್ವಾಗತ ಕೋರಲು ಊರಿನ ಜನ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ರೈತ ದಂಪತಿ ಬಸವಣ್ಣ ಮತ್ತು ನಾಗರತ್ನ ಅವರ ಹೆಮ್ಮೆಯ ಪುತ್ರಿ ಬಿ. ಚೈತ್ರಾ, ಪ್ರತಿಷ್ಠಿತ ಖೋ ಖೋ ವಿಶ್ವಕಪ್​ನಲ್ಲಿ ಭಾಗವಹಿಸಿದ್ದೇ ದೊಡ್ಡ ಸಂಗತಿ ಎಂದು ಸಂತಸಪಟ್ಟಿದ್ದ ಗ್ರಾಮಸ್ಥರು, ಊರಿಗೆ ಹಾಗೂ ದೇಶಕ್ಕೆ ಕೀರ್ತಿ ತರುವುದರ ಜತೆಗೆ ಪೋಷಕರನ್ನು ಹೆಮ್ಮೆ ಪಡಿಸಿದ ಚೈತ್ರಾ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. ವಿಶ್ವಕಪ್​ ಪಟ್ಟವನ್ನು ಮುಡಿಗೇರಿಸಿಕೊಂಡ ಚೈತ್ರಾ ತವರಿನಲ್ಲಿ ಸದ್ಯ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಮೀಣ ಪ್ರತಿಭೆಯ ಜನ್ಮದಾತರಿಗೆ ಸನ್ಮಾನ ಮಾಡಿ, ಗೌರವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net