ತುಮಕೂರು ವಿವಿ ವಿದ್ಯಾರ್ಥಿಗಳ ಮಧ್ಯಾಹ್ನ ಭೋಜನ ಯೋಜನೆಗೆ ಯದುವೀರ್ ಚಾಲನೆ

Yaduveer_Uta
Published on

ವಿಜಯವಾಣಿ ಸುದ್ದಿಜಾಲ, ತುಮಕೂರು: ದೇಶದಲ್ಲೇ ಪ್ರಥಮವೆನಿಸಿದ ತುಮಕೂರು ವಿಶ್ವವಿದ್ಯಾಲಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನ ಯೋಜನೆಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೋಮವಾರ ಚಾಲನೆ ನೀಡಿ, ಜ್ಞಾನದ ಹಸಿವಿನ ಜತೆಗೆ ಹೊಟ್ಟೆಯ ಹಸಿವು ತಣಿಸುವ ವಿವಿಯ ಮಧ್ಯಾಹ್ನ ದ ಭೋಜನ ಯೋಜನೆ ದೇಶದ ಎಲ್ಲಾ ವಿವಿಗಳಿಗೆ ಮಾದರಿ ಆಗಲಿ. ಇದು ದೊಡ್ಡ ಮಟಕ್ಕೆ ಬೆಳೆಯಲಿ ಎಂದು ಆಶಿಸಿದರು.

ವಿವಿಯ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗು ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ ವತಿಯಿಂದ ವಿವಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಮಧ್ಯಾಹ್ನ ಭೋಜನ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯದುವೀರ್, ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಲು ವಿದ್ಯೆಯ ಜತೆಗೆ ಆರೋಗ್ಯವೂ ಮುಖ್ಯ. ಪೌಷ್ಠಿಕಾಂಶಯುತ ಆಹಾರ ಸೇವನೆ ವಿದ್ಯಾರ್ಥಿಗಳಿಗೆ ಅತ್ಯವಶ್ಯ ಎಂದರು.

ನಮ್ಮ ದೇಶದಲ್ಲಿ ಪೌಷ್ಠಿಕ ಆಹಾರದ ಕೊರತೆ ಇದೆ. ಪಾಶ್ಚಿಮಾತ್ಯ ಪದ್ಥತಿ ಆಹಾರದ ಬದಲು ಸ್ಥಳೀಯ ಆಹಾರ ಪದ್ಥತಿಯನ್ನು ಈ ಯೋಜನೆಯಲ್ಲಿ ಬಳಸಿಕೊಂಡು ರೈತರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡುತ್ತಿರುವುದು ಶ್ಲಾಘನೀಯ ಕಾರ್ಯ. ಈ ಸೇವೆಯಲ್ಲಿ ಕೈಜೋಡಿಸಿರುವ ಎಲ್ಲರು ಅಭಿನಂದನಾರ್ಹರು ಎಂದು ಹೇಳಿದರು.

ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರಿಗಳ ಅಧ್ಯಕ್ಷತೆವಹಿಸಿದ್ದರು. ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ ಅಧ್ಯಕ್ಷ ಸ್ವಾಮಿ ಜಪಾನಂದಜೀ, ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ , ವಿವಿ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರತ್ನಕಲಾ, ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net