

ಉತ್ತರಪ್ರದೇಶ: ಪೊಲೀಸ್ ಪೇದೆಯೊಬ್ಬರು ಇಲಾಖೆಯಲ್ಲಿ ತಮಗೆ ಆಗುತ್ತಿರುವ ಸಂಕಷ್ಟದ ಬಗ್ಗೆ ಹೇಳಿ ಕಣ್ಣೀರಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ನಮ್ಮ ಇಲಾಖೆ ಕನಿಷ್ಠ ಪಕ್ಷ ನಮ್ಮ ಕಷ್ಟವನ್ನು ಕೇಳುವ ಕಾಳಜಿ ಕೂಡ ಮಾಡುತ್ತಿಲ್ಲ. ನಮ್ಮ ಕುಟುಂಬಕ್ಕೆ ನಾವೇ ಆಸರೆ. ಆದರೆ ನಮ್ಮ ಮನೆಯವರಿಗೆ ಏನಾದರೂ ಕಷ್ಟ ಬಂದರೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜುಲೈ 20ಕ್ಕೆ ನನ್ನ ತಂಗಿ ಸಾವನ್ನಪ್ಪಿದ್ದಾಳೆ. ಅದಕ್ಕಾಗಿ ನಾನು ರಜೆಗಾಗಿ ಮನವಿ ಮಾಡಿದ್ದೇ, ಇನ್ನು ನಮ್ಮನ್ನು ದೂರದ ಊರಿಗೆ ಪೋಸ್ಟಿಂಗ್ ಹಾಕುವ ಕಾರಣ ಅಲ್ಲಿಂದ ನಮ್ಮ ಕುಟುಂಬ ಹೇಗಿದೆ? ಅವರ ಜತೆಗೆ ನಾವು ಸ್ವಲ್ಪ ಕಾಲ ಕಳೆಯಲು ಆಗುತ್ತಿಲ್ವಲ್ಲ. ನನ್ನ ತಂಗಿ ಸಾವನ್ನಪ್ಪಿದ ಕಾರಣ ಜುಲೈ 20ಕ್ಕೆ ನನಗೆ ರಜೆ ಬೇಕಿತ್ತು. ಅದರೂ ನನಗೆ ರಜೆ ನೀಡಿಲ್ಲ ಎಂದು ಅಧಿಕಾರಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಯುಪಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 10-12 ಕಾನ್‌ಸ್ಟೆಬಲ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬದನ್ನು ಕೂಡ ಹೇಳಿ ಕಣ್ಣೀರು ಹಾಕಿದ್ದಾರೆ.
ವಿಡಿಯೋ ಮಾಡಿರುವ ಪೊಲೀಸ್ ಪೇದೆಯನ್ನು ಬಾಗ್‌ಪತ್ ಪೊಲೀಸ್ ಇಲಾಖೆಯ ಓಂವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ವಿಡಿಯೋವನ್ನು ಓಂವೀರ್ ಸಿಂಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವಾಲಯವು ರಚಿಸಿದ ಕಾರ್ಯಪಡೆಯು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯಲ್ಲಿ ಆತ್ಮಹತ್ಯೆ ಪ್ರಕರಣಗಳ ಹೆಚ್ಚುತ್ತಿರಲು ಕಾರಣ ಇಲಾಖೆಯಲ್ಲಿ ಅವಮಾನ, ಕಿರುಕುಳ ಮತ್ತು ರಜೆಗೆ ಸಂಬಂಧಿಸಿದ ಸಮಸ್ಯೆಗಳು ಎಂದು ಕಂಡು ಬಂದಿತ್ತು. ಇಲಾಖೆಯಲ್ಲಿ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಒತ್ತಡ ಹೆಚ್ಚಾಗಿತ್ತು, ಇದಕ್ಕಾಗಿಯೇ ಅಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.