

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಅಪರೂಪದ ಅತೀ ಉದ್ದದ ಹಾಗೂ ಹೆಚ್ಚು ತೂಕದ ಬಂಗಡೆ ಮೀನು ಸಿಗುವ ಮೂಲಕ ಅಚ್ಚರಿಯನ್ನು ಮೂಡಿಸಿದೆ.
ಕಾರವಾರದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸಂಬಂಧಪಟ್ಟ ಪಾತಿ ದೋಣಿಯ ಬೀಡು ಬಲೆಗೆ ಬಿದ್ದ ಮೀನುಗಳಲ್ಲಿ ಒಂದು ದೊಡ್ಡ ಗಾತ್ರದ ಬಂಗಡೆ ಮೀನು ದೊರೆತಿದ್ದು, ಇದನ್ನು ಕಂಡು ಮೀನುಗಾರರೇ ಅಚ್ಚರಿಗೆ ಒಳಗಾಗಿದ್ದಾರೆ.
ಆನಂದು ರಾಮಾ ಹರಿಕಂತ್ರ ಅವರಿಂದ ಈ ಬಂಗಡೆ ಮೀನನ್ನು ಪಡೆದುಕೊಂಡ ನವೀನ ಹರಿಕಂತ್ರ ಎನ್ನುವವರು ಈ ಬಂಗಡೆ ಮೀನನ್ನು ಮೀನುಗಾರರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ವಿನಾಯಕ ಹರಿಕಂತ್ರ ಅವರಿಗೆ ನೀಡಿದ್ದಾರೆ.
ಬಂಗಡೆ ಮೀನು ಸುಮಾರು 48 ಸೆ.ಮೀ. ಉದ್ದ ಇದ್ದು, ಸುಮಾರು 12 ಸೆ.ಮೀ. ಅಗಲವಿದೆ. ಭಾರತದಲ್ಲಿ ಇದುವರೆಗೆ ದೊರೆತ ಅತಿ ದೊಡ್ಡ ಬಂಗಡೆ ಮೀನು ಎಂಬ ದಾಖಲೆ ಹೊಂದಿರುವ ಗಂಡು ಬಂಗಡೆ 36 ಸೆ.ಮೀ. ಉದ್ದ ಹಾಗೂ ಹೆಣ್ಣು ಬಂಗಡೆ 42 ಸೆ.ಮೀ. ಉದ್ದವಿದೆ ಎಂದು ಕಡಲ ಜೀವ ಶಾಸ್ತ್ರಜ್ಞ ಶಿವಕುಮಾರ ಹರಗಿ ಮಾಹಿತಿ ನೀಡಿದ್ದಾರೆ.
ಕಾರವಾರದಲ್ಲಿ ದೊರೆತ ಬಂಗಡೆ ಮೀನು ಇದಕ್ಕಿಂತ ಉದ್ದವಾಗಿದ್ದು, ಭಾರತದಲ್ಲಿ ಇದುವರೆಗೆ ಕಂಡು ಬಂದ ಬಂಗಡೆಗಳಲ್ಲಿ ಇದು ಅತಿ ದೊಡ್ಡದು. ಸದ್ಯ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ವೀಕ್ಷಣೆಗೆ, ಅಧ್ಯಯನಕ್ಕೆ ಅನುಕೂಲವಾಗುವಂತೆ ಫಾರ್ಮಾಲಿನ್ ಹಾಕಿ ಈ ಬಂಗಡೆ ಮೀನನ್ನು ಕಾರವಾರದ ವಿಜ್ಞಾನ ಕೇಂದ್ರದಲ್ಲಿ ಸಂರಕ್ಷಿಸಿ ಇಡಲಾಗುತ್ತಿದೆ.