Amit Shah | ಅಕ್ರಮ ನುಸುಳುಕೋರರಿಂದ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ : ಗೃಹ ಸಚಿವ ಅಮಿತ್ ಷಾ

Amit Shah
Published on

Amit Shah: ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ದೇಶವನ್ನು ಪ್ರವೇಶಿಸುತ್ತಿರುವ ನುಸುಳುಕೋರರಿಂದ, ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೃಹ ಸಚಿವ ಷಾ, ದೇಶದಲ್ಲಿ ಮತದಾನದ ಹಕ್ಕುಗಳು ನಮ್ಮ ನಾಗರಿಕರಿಗೆ ಮಾತ್ರ ಲಭ್ಯವಿರಬೇಕು, ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕೆಂದು ಎಂದು ನಿರ್ಧರಿಸುವ ಹಕ್ಕನ್ನು ನಮ್ಮ ನಾಗರಿಕರಿಗೆ ಹೊರತುಪಡಿಸಿ, ಬೇರೆ ಯಾರಿಗೂ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇತ್ತೀಚೆಗೆ ಮುಸ್ಲಿಂ ಜನಸಂಖ್ಯೆ ಶೇಕಡಾ 24.6 ರಷ್ಟು ಹೆಚ್ಚಾಗಿದೆ, ಆದರೆ, ಹಿಂದೂ ಜನಸಂಖ್ಯೆಯು ಶೇಕಡಾ 4.5 ರಷ್ಟು ಕಡಿಮೆಯಾಗಿದೆ, ಇದಕ್ಕೆ ಕಾರಣ ಅಕ್ರಮ ಒಳನುಸುಳುವಿಕೆ ಎಂದರು. ಭಾರತದ ವಿಭಜನೆಯು ಧರ್ಮದ ಕಾರಣದಿಂದಾಗಿ ಸಂಭವಿಸಿದೆ ಎಂದು ಉಲ್ಲೇಖಿಸಿದ ಷಾ, ಪಾಕಿಸ್ತಾನ ಒಳನುಸುಳುವಿಕೆ ಜಾಸ್ತಿಯಾಗಿದೆ, ಇದರ ಪರಿಣಾಮದಿಂದಾಗಿ ಆ ಸಮುದಾಯದ ಜನಸಂಖ್ಯೆಯಲ್ಲಿ ಈ ಮಟ್ಟದ ಬದಲಾವಣೆ ಕಂಡುಬಂದಿದೆ, ಕೆಲವು ರಾಜಕೀಯ ಪಕ್ಷಗಳು ಒಳನುಸುಳುವವರನ್ನು ಮತಬ್ಯಾಂಕ್ ಆಗಿ ಪರಿಗಣಿಸುತ್ತಿವೆ ಎಂದು ಹೇಳಿದರು.

ಒಳನುಸುಳುವವರು ಮತ್ತು ನಿರಾಶ್ರಿತರು ಬೇರೆ ಬೇರೆ..

ಒಳನುಸುಳುವವರು ಮತ್ತು ನಿರಾಶ್ರಿತರ ನಡುವೆ ತುಂಬಾ ವ್ಯತ್ಯಾಸವಿದೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಡಿಮೆಯಾದ ಎಲ್ಲಾ ಹಿಂದೂ ಜನಸಂಖ್ಯೆಯಲ್ಲಿ ಅನೇಕರು ಭಾರತದಲ್ಲಿ ಆಶ್ರಯ ಪಡೆದರು. ಮತ್ತು ಭಾರತದಲ್ಲಿ ಹೆಚ್ಚಿದ ಮುಸ್ಲಿಂ ಜನಸಂಖ್ಯೆ ಸಹಜ ಪ್ರಕ್ರಿಯೆಯಲ್ಲ, ಅದು ಅನೇಕ ಮುಸ್ಲಿಮರು ದೇಶಕ್ಕೆ ನುಸುಳಿದ್ದರಿಂದ ಎಂದು ಗೃಹ ಸಚಿವರು ಹೇಳಿದರು. ಮತದಾರರ ಪಟ್ಟಿಯಲ್ಲಿ ನುಸುಳುಕೋರರನ್ನು ಸೇರಿಸುವುದರಿಂದ ಸಂವಿಧಾನದ ಚೈತನ್ಯ ಕಲುಷಿತಗೊಳ್ಳುತ್ತದೆ, ಮತದಾನದ ಹಕ್ಕು ದೇಶದ ನಾಗರಿಕರಿಗೆ ಮಾತ್ರ ಲಭ್ಯವಿರಬೇಕು ಎಂದು ಪುನರುಚ್ಛರಿಸಿದರು. ನಿರಾಶ್ರಿತರು ತಮ್ಮ ಧರ್ಮವನ್ನು ಉಳಿಸಲು ಭಾರತಕ್ಕೆ ಬರುತ್ತಾರೆ, ಆದರೆ ನುಸುಳುಕೋರರು ಆರ್ಥಿಕ ಕಾರಣಗಳಿಗಾಗಿ ಇಲ್ಲಿಗೆ ಬರುತಿದ್ದಾರೆ, ಧಾರ್ಮಿಕ ಕಿರುಕುಳವನ್ನು ಎದುರಿಸದ ಮತ್ತು ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ಅಕ್ರಮವಾಗಿ ಬರಲು ಬಯಸುವವರು ನುಸುಳುಕೋರರು ಎಂದು ತಿಳಿಸಿದರು.

ಎಸ್​ಐಆರ್​ ರಾಷ್ಟ್ರೀಯ ಸಮಸ್ಯೆ ಎಂದ ಅಮಿತ್ ಷಾ

ಒಳನುಸುಳುವಿಕೆ ಮತ್ತು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ಹೇಳಿದ ಷಾ, ಅವು ರಾಷ್ಟ್ರೀಯ ಸಮಸ್ಯೆಗಳು ಎಂದರು. ಎಸ್‌ಐಆರ್ ವಿಷಯದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ, ಆದರೆ, ಈ ಕಸರತ್ತು ಯುಪಿಎ ಆಡಳಿತಾವಧಿಯಲ್ಲಿಯೂ ನಡೆದಿತ್ತು. ವಿರೋಧ ಪಕ್ಷಗಳು ತಮ್ಮ ಮತ ಬ್ಯಾಂಕ್‌ಗಳು ಕಡಿತಗೊಳ್ಳುತ್ತಿರುವುದರಿಂದ ಅದನ್ನು ವಿರೋಧಿಸುತ್ತಿವೆ. ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವುದು ಆಯೋಗದ ಸಾಂವಿಧಾನಿಕ ಜವಾಬ್ದಾರಿಯಾಗಿದ್ದು, ನಿಮಗೆ ಏನಾದರೂ ಆಕ್ಷೇಪಣೆಗಳಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net