

ಕೊಲ್ಕತ್ತ: ಇಸ್ಲಾಂ ಧರ್ಮದಲ್ಲಿ ಪ್ರಮುಖವಾಗಿ ಆಚರಿಸುವ ಬಕ್ರಿದ್ ಹಬ್ಬವು ತ್ಯಾಗ, ಬಲಿದಾನಕ್ಕೆ ಹೆಸರುವಾಸಿಯಾಗಿದ್ದು, ವ್ಯಕ್ತಿ ಪೂಜೆಗೆ ಅಷ್ಟಾಗಿ ಪ್ರಾಮುಖ್ಯತೆ ನೀಡುವುದಿಲ್ಲ. ಈದ್ ಹಬ್ಬದಂದು ಮುಸ್ಲಿಂ ಬಾಲಕಿಯನ್ನು ದುರ್ಗಾ ದೇವಿಯ ರೀತಿ ಅಲಂಕರಿಸಿ, ಪೂಜಿಸಿ ಭಾವೈಕ್ಯತೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯೂ ಪಶ್ಚಿಮ ಬಂಗಾಳದರ ಕೊಲ್ಕತ್ತಾದಲ್ಲಿ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಖುತಿ ಪೂಜೆಯ ಅಂಗವಾಗಿ ರಿಮಿಶಾ ಎಂಬ ಬಾಲಕಿಗೆ ದುರ್ಗಾ ದೇವಿಯ ರೀತಿ ಅಲಂಕಾರ ಮಾಡಲಾಗಿದ್ದು, ಈದ್-ಅಲ್-ಅಧಾ ಹಬ್ಬದ ದಿನದಂದು ನೆರವೇರಿಸಲಾಗಿದೆ. ಕೊಲ್ಕತ್ತಾದ ದುರ್ಗಾ ದೇವಿ ಪೂಜಾ ಸಮಿತಿಯೂ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವಿಡಿಯೋದಲ್ಲಿ ಕಂಡು ಬಂದಿರುವ ಹಾಗೆ ಬಾಲಕಿ ರಿಮಿಶಾ ಹಾಗೂ ಆಕೆಯ ತಾಯಿ ಸಂಜಿದಾ ಪೂಜೆಯಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ. ಕೊಲ್ಕತ್ತಾದ ಸಿಂಥಿ ಸರ್ಕಸ್ ಮೈದಾನದ ಬಳಿ ಇರುವ ಕಾಶೀಶ್ವರ ಶಿವನ ದೇವಾಲಯದಲ್ಲಿ ನಡೆದಿದೆ. ಖುತಿ ಪೂಜೆಯು ಸಾಮಾನ್ಯವಾಗಿ ರಥಯಾತ್ರಯ ಸಂದರ್ಭದಲ್ಲಿ ನಡೆಯುತ್ತದೆ. ಆದರೆ, ಈದ್ ದಿನದಂದು ಪೂಜೆ ನೆರವೇರಿಸಿರುವುದು ಎಲ್ಲರಲ್ಲೂ ಆಶ್ವರ್ಯ ಮೂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾರಾನಗರ ಸ್ನೇಹ ಕೂಟದ ಸದಸ್ಯರು ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಲು ಈದ್ ದಿನದಂದು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಾಮನವಮಿ ಹಾಗೂ ಹನುಮ ಜಯಂತಿ ಕಾರ್ಯಕ್ರಮದ ವೇಳೆ ಉಂಟಾದ ಘರ್ಷಣೆಗಳಿಂದಾಗಿ ನಮಗೆ ತೀವ್ರ ಬೇಸರವನ್ನುಂಟು ಮಾಡಿತ್ತು.
ನಾವು ಚಿಕ್ಕಂದಿನಿಂದ ಹಿಮದೂ -ಮುಸ್ಲಿಂ ಒಂದೇ ಎಂದು ಓದಿಕೊಂಡು ಬಂದಿದ್ದೇವೆ. ಎರಡು ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡಲು ಹಲವು ಬಾರಿ ಯತ್ನಿಸಲಾಗಿದೆ. ಆದ್ದರಿಮದ ನಾವು ಈದ್ ಹಬ್ಬದ ದಿನದಂದು ಖುತಿ ಪೂಜೆಯನ್ನು ಹಮ್ಮಿಕೊಂಡು ಭಾವೈಕ್ಯತೆಯ ಸಂದೇಶವನ್ನು ಸಾರಿದ್ದೇವೆ ಎಂದು ಬಾರಾನಗರ ಸ್ನೇಹ ಕೂಟದ ಅಧ್ಯಕ್ಷ ಅಜಯ್ ಘೋಶ್ ತಿಳಿಸಿದ್ದಾರೆ.