ಸಂಸತ್​ ಮುಂಗಾರು ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ ಸಾಧ್ಯತೆ!

UCC
Published on

ನವದೆಹಲಿ: ಮುಂದಿನ ತಿಂಗಳ ನಡೆಯಲಿರುವ ಸಂಸತ್​ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಸಂಬಂಧ ಮಸೂದೆಯನ್ನು ಅಂಗೀಕರಿಸಬಹುದು ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.

ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಪರಿಶೀಲನೆಗೆ ಕಳುಹಿಸಬಹುದು ಎಂದು ಹೇಳಲಾಗಿದೆ. ನಾಗರಿಕ ಸಂಹಿತೆಯ ಕುರಿತಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಲಾಗಿದೆ.

ಮುಂಗಾರು ಅಧಿವೇಶನದಲ್ಲಿ ಮಂಡನೆ

ಏಕರೂಪ ನಾಗರಿಕ ಸಂಹಿತೆ ಸಂಬಂಧಿಸಿದಂತೆ ಕಾನೂನು ಆಯೋಗ ಇತ್ತೀಚೆಗೆ, ಜನರಿಂದ ಅಭಿಪ್ರಾಯ ಕೇಳಿತ್ತು, ಇದಕ್ಕಾಗಿ ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು ಅದು ಜುಲೈ 14ಕ್ಕೆ ಕೊನೆಗೊಳ್ಳಲಿದೆ. ಸಂಸತ್​ ಮುಂಗಾರು ಅಧಿವೇಶನವು ಜುಲೈ ಮೂರನೇ ವಾರದಲ್ಲಿ ಆರಂಭಗೊಳ್ಳಲಿದ್ದು, ಹೊಸ ಹಾಗು ಹಳೇ ಸಂಸತ್​ ಭವನದಲ್ಲಿ ಕಾರ್ಯ ಕಲಾಪಗಳು ನಡೆಯಲಿವೆ ಎಂದು ಹೇಳಲಾಗಿದೆ.

UCC

ಮಂಗಳವಾರ ಮಧ್ಯಪ್ರದೇಶದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದರು. ವೋಟ್​ ಬ್ಯಾಂಕ್​ ರಾಜಕಾರಣ ಮಾಡುತ್ತಿರುವವರು ಈ ವಿಚಾರದಲ್ಲಿ ಮುಸ್ಲಿಮರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ಮೇಲೆ ಆರೋಪಿಸಿದ್ದರು.

ರಾಷ್ಟ್ರವ್ಯಾಪಿ ಚರ್ಚೆ

ಸುಪ್ರೀಂ ಕೋರ್ಟ್​ ಸಹ ಏಕರೂಪ ನಾಗರಿಕ ಸಂಹಿತೆಯ ಅಗ್ಯತತೆ ಬಗ್ಗೆ ಒತ್ತಿ ಹೇಳಿದೆ. ಆದರೆ, ಕೆಲವರು ವೋಟ್​ ಬ್ಯಾಂಕ್​ ರಾಜಕಾರಣಕ್ಕಾಗಿ ಇದನ್ನು ವಿರೋಧಿಸುತ್ತಿದ್ದಾರೆ. ಪ್ರಧಾನಿ ಮೋದಿ ಹೇಳಿಕೆಯು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಯಿತು. ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರದ ಪರಿಸ್ಥಿತಿಯಂತಹ ನೈಜ ಸಮಸ್ಯೆಗಳಿಂದ ದಿಕ್ಕು ತಪ್ಪಿಸುವ ತಂತ್ರವಾಗಿ ಪ್ರಧಾನಿ ಮೋದಿ UCC ಸಮಸ್ಯೆಯನ್ನು ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿತ್ತು.

ಏಕರೂಪ ನಾಗರಿಕ ಸಂಹಿತೆಯು ಧರ್ಮಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಆಧರಿಸಿದ ವೈಯಕ್ತಿಕ ಕಾನೂನುಗಳನ್ನು ಧರ್ಮ, ಜಾತಿ, ಪಂಥ, ಲೈಂಗಿಕ ದೃಷ್ಟಿಕೋನ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಒಂದು ಸಾಮಾನ್ಯ ಕಾನೂನಿನೊಂದಿಗೆ ಬದಲಿಸುವ ಗುರಿಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net