

ಕಂಪಾಲ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿಯನ್ನು ಆಕೆಯ ತಂದೆ ಜೀವಂತವಾಗಿ ಸುಡಲು ಯತ್ನಿಸಿ, ಸುಟ್ಟಗಾಯಗಳಿಂದ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಘಟನೆ ಉಗಾಂಡದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ರಹೆಮಾ ಕ್ಯೊಮುಹೆಂಡೋ (24) ಸಂತ್ರಸ್ತ ಯುವತಿ. ತಂದೆಯ ಶಿಕ್ಷೆಯಿಂದ ಕನಿಷ್ಠ ಒಂದು ತಿಂಗಳು ಉಗಾಂಡದ ಬಾಲೆ ನಗರದ ಸ್ಥಳೀಯ ಆಸ್ಪತ್ರೆಯಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ರಹೆಮಾಳನ್ನು ಆಕೆಯ ತಂದೆ ಶೇಖ್ ಹುಸೇನ್ ಬೈರುಹಂಗ ಹುಸೇನ್ ಮೇ 4ರಂದು ಜೀವಂತವಾಗಿ ಸುಡಲು ಯತ್ನಿಸಿದ್ದ.
ರಹೆಮಾಳಿಗೆ ಕಾಲು, ಹೊಟ್ಟೆ, ಕುತ್ತಿಗೆ, ಪಕ್ಕೆಲುಬುಗಳು ಹಾಗೂ ಬೆನ್ನಿನ ಹಿಂಭಾಗದಲ್ಲಿ ಗಂಭೀತರವಾದ ಸುಟ್ಟ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೊದಲೇ ಆಧ್ಯಾತ್ಮ ಗುರುವಾಗಿದ್ದ ಶೇಖ್ ಹುಸೇನ್, ಮಗಳು ಕ್ರಿಶ್ಚಿಯನ್ಗೆ ಮತಾಂತರಗೊಂಡಿದ್ದಾಳೆಂಬ ಸುದ್ದಿ ಕೇಳಿ ಆಕ್ರೋಶಗೊಂಡು ಕೃತ್ಯವೆಸಗಿದ್ದಾನೆ. ಬಾಲೆ ಜಿಲ್ಲೆಯ ನವುಯೋ ಗ್ರಾಮದ ಚಿಕ್ಕಮ್ಮನ ಮನೆಯಲ್ಲಿದ್ದಾಗ ರಹೆಮಾ ಹೆಚ್ಚಾಗಿ ಕ್ರಿಶ್ಚಿಯನ್ ರೇಡಿಯೋ ಕೇಳುತ್ತಿದ್ದಳಂತೆ. ಬಳಿಕ ರೋಮನ್ ಕ್ಯಾಥೋಲಿಕ್ ಆಗಿರುವ ತಂದೆಯ ಸ್ನೇಹಿತನಿಗೆ ಕರೆ ಮಾಡಿ ಕ್ರಿಶ್ಚಿಯನ್ಗೆ ಮತಾಂತರಗೊಳ್ಳುವುದಾಗಿ ಹೇಳಿ ತನ್ನ ಇಚ್ಛೆಯನ್ನು ನೆರವೇರಿಸಿಕೊಂಡಿದ್ದಾಳೆ. ಈ ವಿಚಾರ ತಂದೆಗೆ ತಿಳಿದು ಕೋಪಗೊಂಡ ಆತ ಇಂಧನದಿಂದ ಸುಡಲು ಯತ್ನಿಸಿದ್ದಾನೆ.
ಆಸ್ಪತ್ರೆಯಲ್ಲಿ ಮಾತನಾಡಿರುವ ರಹೆಮಾ, ಜೀಸಸ್ ಅನ್ನು ದೇವರೆಂದು ಸ್ವೀಕರಿಸಿದ್ದೇನೆ. ಜೀಸಸ್ ಬಳಿ ಸೇರಲು ಮತ್ತು ಮೋಕ್ಷಕ್ಕಾಗಿ ನಾನು ಮತಾಂತರಗೊಂಡಿದ್ದೇನೆ. ಜೀಸಸ್ನಿಂದ ಸಂತೋಷಗೊಂಡು ತುಂಬಾ ಉತ್ಸಾಹದಲ್ಲಿರುವ ಸಮಯದಲ್ಲಿ ಎಚ್ಚರಗೊಂಡ ನನ್ನ ತಂದೆ ಬೆಡ್ ರೂಮಿಗೆ ಬಂದು ಕೋಪದಿಂದ ಥಳಿಸಲು ಆರಂಭಿಸಿದರು. ಕಪ್ಪಾಳಕ್ಕೆ ಹೊಡೆದರು ಹಾಗೂ ಕಾಲಿನಿಂದ ಒದ್ದರು. ಬಳಿಕ ಇಂಧನವನ್ನು ಸುರಿದು ಜೀವಂತವಾಗಿ ಸುಡಲು ಯತ್ನಿಸಿದರು ಎಂದು ಮಗಳು ದೂರಿದ್ದಾಳೆ.
ರಹೆಮಾ ಸಂಬಂಧಿಯೇ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರು ಎಂದು ತಿಳಿದುಬಂದಿದ್ದು, ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. (ಏಜೆನ್ಸೀಸ್)