ಬಿಗ್ ಬ್ಯೂಟಿಫಲ್, ಹೊಸ ಪಕ್ಷ​! ಹೆಚ್ಚಾಯ್ತು ಟ್ರಂಪ್​-ಮಸ್ಕ್​ ನಡುವಿನ ಮುಸುಕಿನ ಗುದ್ದಾಟ | Elon Musk

ವಿಜಯವಾಣಿ - 2025-07-01T184746.171
Published on

Elon Musk: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತಮಿತ್ರ ಮತ್ತು ರಾಜಕೀಯ ಸಲಹೆಗಾರರಾಗಿ ಗುರುತಿಸಿಕೊಂಡಿರುವ ಉದ್ಯಮಿ, ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್​ ಮಸ್ಕ್, ಇದೀಗ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್​ ಜೊತೆಗೆ ಮುಸುಕಿನ ಗುದ್ದಾಟದಲ್ಲಿ ಸಖತ್ ಬಿಜಿಯಾಗಿದ್ದಾರೆ. ಇಬ್ಬರು ದೈತ್ಯರ ನಡುವಿನ ಟೀಕಾ ಪ್ರಹಾರ ಸದ್ಯ ತಾರಕಕ್ಕೇರಿದೆ.

ಈ ಹಿಂದೆ ಟ್ರಂಪ್​ರನ್ನು ಬೆಂಬಲಿಸಿದ್ದ ಮಸ್ಕ್, ಈಗ ತಮ್ಮ ಮಾಜಿ ಸ್ನೇಹಿತನನ್ನು ಮತ್ತು ಅವರ ಆಡಳಿತ ನೀತಿಗಳನ್ನು ಸರಣಿ ಪೋಸ್ಟ್‌ಗಳಲ್ಲಿ ಟೀಕಿಸಲು ಶುರು ಮಾಡಿದ್ದಾರೆ. ಟ್ರಂಪ್ ಅವರ ಪ್ರಸ್ತಾವಿತ 'ಬಿಗ್ ಬ್ಯೂಟಿಫುಲ್ ಮಸೂದೆ'ಗೆ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಮಸ್ಕ್​, "ಈ ಮಸೂದೆ ಸಾಮಾನ್ಯ ನಾಗರಿಕರಿಗೆ ಹೊರೆಯಾಗಲಿದೆ. ಈ ಹಿಂದೆ ಖರ್ಚು ಕಡಿತಗೊಳಿಸುವುದಾಗಿ ಭರವಸೆ ನೀಡಿದ್ದ ರಿಪಬ್ಲಿಕನ್ ನಾಯಕರು, ಅದೇ ಈಗ ಬೃಹತ್ ಖರ್ಚನ್ನು ಬೆಂಬಲಿಸುತ್ತಿರುವುದು ಆಶ್ಚರ್ಯ" ಎಂದಿದ್ದಾರೆ.

ಟ್ರಂಪ್ ಪರ 250 ಮಿಲಿಯನ್ ಡಾಲರ್​ ಪ್ರಚಾರ ಮಾಡಿದ್ದ ಎಲಾನ್​ ಮಸ್ಕ್, ಟ್ರಂಪ್ ಅವರ ಪ್ರಸ್ತಾವಿತ ಮಸೂದೆ ಅಮೆರಿಕನ್ನರಿಗೆ ದೊಡ್ಡ ತೊಡಕು ಉಂಟು ಮಾಡಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಮಸೂದೆಯು ದೇಶದ ಸಾಲದ ಮಿತಿಯನ್ನು ದಾಖಲೆಯ ಐದು ಟ್ರಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸುತ್ತದೆ. ಜನರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಹೊಸ ರಾಜಕೀಯ ಪಕ್ಷಕ್ಕೆ ಇದು ಸೂಕ್ತ ಸಮಯ ಎಂದು ಮಸ್ಕ್​ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಟ್ರಂಪ್​ಗೆ ಟಕ್ಕರ್​ ಕೊಟ್ಟಿದ್ದಾರೆ.

ಪ್ರಸ್ತುತ ಅಮೇರಿಕಾದ ರಾಜಕೀಯ ವ್ಯವಸ್ಥೆ ಬಗ್ಗೆ ಮಸ್ಕ್ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಯುಎಸ್ ಸೆನೆಟ್ ಪ್ರಸ್ತುತ ಟ್ರಂಪ್ ಅವರ "ಬಿಗ್​ ಬ್ಯೂಟಿಫುಲ್​ ಮಸೂದೆ"ಯ ಮೇಲೆ ಮತದಾನದಲ್ಲಿ ತೊಡಗಿದೆ. ರಿಪಬ್ಲಿಕನ್ನರು ಜುಲೈ 4, ಸ್ವಾತಂತ್ರ್ಯ ದಿನಾಚರಣೆಯ ಮೊದಲು ಮಸೂದೆಯನ್ನು ಅಂಗೀಕರಿಸಲು ಮುಂದಾಗಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net