

ಬೆಂಗಳೂರು: ಗೂಡ್ಸ್ ವಾಹನ ಚಾಲಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ನಂತರ ದೇಹಕ್ಕೆ ಬೆಂಕಿ ಹಚ್ಚಿ ಅರೆಬರೆ ಸುಟ್ಟಿದ್ದ ಇಬ್ಬರು ದುಷ್ಕರ್ವಿುಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ನಿವಾಸಿ ಟಿ. ಕೃಷ್ಣ (43), ಹಲಸೂರಿನ ನಿವಾಸಿ ಕೃಷ್ಣ (41) ಬಂಧಿತರು. ರಾಮಮೂರ್ತಿನಗರದ ನಿವಾಸಿ ಶ್ರೀನಿವಾಸ್ (41) ಮೃತ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 1 ಆಟೋ, 1 ಟಿವಿಎಸ್ ಸ್ಟಾರ್ ಸಿಟಿ ಬೈಕ್, ಚೂರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಟಿ. ಕೃಷ್ಣ ಕಲ್ಕೆರೆಯ ಮಾದಪ್ಪ ಲೇಔಟ್ನಲ್ಲಿ ‘ತರುಣ್ ಪ್ಯಾಕರ್ಸ್ ಆಂಡ್ ಮೂವರ್ಸ್’ ಕಚೇರಿ ನಡೆಸುತ್ತಿದ್ದ. ಒಂದು ಮನೆಯಿಂದ ಮತ್ತೊಂದು ಮನೆಗೆ ವಸ್ತುಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದ. ಇದಕ್ಕಾಗಿ 2 ಗೂಡ್ಸ್ ಟೆಂಪೋ ಹೊಂದಿದ್ದ. ಶ್ರೀನಿವಾಸ್ ಈತನ ಗೂಡ್ಸ್ ಟೆಂಪೋದಲ್ಲಿ ಚಾಲಕನಾಗಿದ್ದ. ಇತ್ತೀಚೆಗೆ ಶ್ರೀನಿವಾಸ್ಗೆ ಸಮಯಕ್ಕೆ ಸರಿಯಾಗಿ ವೇತನ ಕೊಡುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡ ಶ್ರೀನಿವಾಸ್, ಮಾ.9ರಂದು ಕೃಷ್ಣನಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ವಿಚಾರವಾಗಿ ಕಚೇರಿಯಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿತ್ತು.
ಅದೇ ದಿನ ತಡರಾತ್ರಿ 2 ಗಂಟೆಗೆ ಕಚೇರಿಯಲ್ಲಿ ಮಲಗಿದ್ದ ವೇಳೆ ಸೈಜುಕಲ್ಲನ್ನು ಶ್ರೀನಿವಾಸ್ನ ತಲೆ ಮೇಲೆ ಮೂರು ಬಾರಿ ಎತ್ತಿ ಹಾಕಿ ಕೊಲೆ ಮಾಡಿದ್ದ. ಮಾ.10ರ ಬೆಳಗ್ಗೆ ಮತ್ತೋರ್ವ ಆರೋಪಿ ಕೃಷ್ಣನ ಸಹಾಯ ಪಡೆದು ಶ್ರೀನಿವಾಸ್ನ ಶವವನ್ನು ರಾಂಪುರ ಕೆರೆಗೆ ಹಾಕಲು ಪ್ರಯತ್ನಿಸಿದ್ದ. ಶವವನ್ನು ಎತ್ತಲಾಗದ ಕಾರಣ, ಅದೇ ದಿನ ರಾತ್ರಿ 11.30ರಲ್ಲಿ ಶ್ರೀನಿವಾಸ್ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅರೆಬರೆ ಸುಟ್ಟುಹಾಕಿದ್ದ. ಪೊಲೀಸರು ಅನುಮಾನದ ಮೇರೆಗೆ ಆರೋಪಿಗಳ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳು ಈ ಹಿಂದೆಯೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಕುಡಿದ ಅಮಲಿನಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.