

ಕಾಸರಗೋಡು: ವರ್ಕಾಡಿಯಲ್ಲಿ ತಾಯಿಯನ್ನು ಪುತ್ರನೇ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದು, ನೆರೆಮನೆಯ ಮಹಿಳೆಯನ್ನು ಬೆಂಕಿಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ.
ವರ್ಕಾಡಿಯ ನಲ್ಲೆಂಗಿ ಎಂಬಲ್ಲಿ ಗುರುವಾರ ನಸುಕಿಗೆ ಭಯಾನಕ ಕೃತ್ಯ ನಡೆದಿದೆ. ನಲ್ಲೆಂಗಿ ನಿವಾಸಿ ಲೂಯಿಸ್ ಮೊಂತೇರೊ ಎಂಬುವರ ಪತ್ನಿ ಹಿಲ್ಡಾ ಮೊಂತೆರೋ (65) ಮೃತಪಟ್ಟ ಮಹಿಳೆ. ನೆರೆಮನೆ ನಿವಾಸಿ ವಿಕ್ಟರ್ ಎಂಬುವರ ಪತ್ನಿ ಲೊಲಿಟಾ ಅವರನ್ನು ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಲ್ಡಾ ಮೊಂತೆರೋ ಪುತ್ರ ಮೆಲ್ವಿನ್ ಮೊಂತೇರೋ(38) ಆರೋಪಿಯಾಗಿದ್ದು, ಕೃತ್ಯವೆಸಗಿಸಿ ಪರಾರಿಯಾಗಿದ್ದ ವೇಳೆ ಬೈಂದೂರಿನ ಕಾಲ್ತೊಡು ಬ್ಯಾತಿಯಾನಿ ಎಂಬಲ್ಲಿ ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದು, ನಂತರ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಮನೆಯಲ್ಲಿ ತಾಯಿ ಮತ್ತು ಪುತ್ರ ಇಬ್ಬರೇ ವಾಸಿಸುತ್ತಿದ್ದು, ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದ ತಾಯಿಗೆ ಗುರುವಾರ ತಡರಾತ್ರಿ 1 ಗಂಟೆ ವೇಳೆಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದು ಮೃತದೇಹವನ್ನು ಸಮೀಪದ ಕುರುಚಲು ಕಾಡಿಗೆ ಎಸೆದಿದ್ದಾನೆ. ನಂತರ ತಾಯಿಗೆ ಸೌಖ್ಯವಿಲ್ಲವೆಂದು ತಿಳಿಸಿ, ಸಂಬಂಧಿಕೆ ನೆರೆಮನೆ ನಿವಾಸಿ ಲೊಲಿಟಾ ಅವರನ್ನು ಕರೆಸಿ, ಅವರ ಮೈಮೇಲೂ ಪೆಟ್ರೋಲ್ ಚೆಲ್ಲಿ ಬೆಂಕಿ ಹಚ್ಚಿದ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಲೊಲಿಟಾ ಬೊಬ್ಬಿಟ್ಟಾಗ ಆಸುಪಾಸಿನವರು ಆಗಮಿಸಿದ್ದು, ಈ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಲೊಲಿಟಾ ಅವರ ತಲೆ ಹಾಗೂ ಕಾಲಿಗೆ ಸುಟ್ಟ ಗಾಯಗಳಾಗಿವೆ. ಕೃತ್ಯವೆಸಗಿದ ಮೆಲ್ವಿನ್ ಅಲ್ಲಿಂದ ಪರಾರಿಯಾಗಿದ್ದು, ಹಿಲ್ಡಾ ಮೊಂತೆರೋ ಮನೆಯಲ್ಲಿಲ್ಲದಿರುವುನ್ನು ಗಮನಿಸಿ ಹುಡುಕಾಟ ನಡೆಸಿದಾಗ ಮನೆಯಿಂದ ಅನತಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ವರ್ಕಾಡಿವರೆಗೂ ನಡೆದುಹೋಗಿ, ಅಲ್ಲಿಂದ ಬಸ್ಸನ್ನೇರಿ ಈತ ಮಂಗಳೂರು ತೆರಳಿ, ಅಲ್ಲಿಂದ ಕೊಲ್ಲೂರು ಭಾಗಕ್ಕೆ ತೆರಳಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಮಂಗಳೂರು ಭಾಗಕ್ಕೆ ಸಂಚರಿಸಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಮಂಜೇಶ್ವರ ಠಾಣಾಯಿಂದ ಮಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್‌ಭಾರತ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ವಾನದಳ, ೆರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿದ್ದು, ಎಸ್.ಪಿ. ವಿಜಯಭಾರತ್ ರೆಡ್ಡಿ ನಿರ್ದೇಶನದಂತೆ ಮಂಜೇಶ್ವರ ಠಾಣಾ ಇನ್‌ಸ್ಪೆಕ್ಟರ್ ಇ.ಅನೂಪ್ ನೇತೃತ್ವದ ಪೊಲೀಸರ ತಂಡ ಪರಿಶೀಲನೆ ನಡೆಸಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಹಿಲ್ಡಾ ಮೊಂತೆರೋ ಅವರ ಇನ್ನೊಬ್ಬ ಪುತ್ರ ವಿದೇಶದಲ್ಲಿದ್ದಾರೆ.
ನಿದ್ರೆ ಮಾಡಿದ ತಾಯಿ ಮೇಲೆ ಬೆಂಕಿಹಚ್ಚಿ ಕೊಲೆಗೈದ ಪುತ್ರ