

ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಪರಿಸರದಲ್ಲಿ ಬೀದಿ ನಾಯಿಗಳ ಉಪಟಳ ಅತಿಯಾಗಿದ್ದು, ನಾಗರಿಕರು ಆತಂಕದಲ್ಲಿದ್ದಾರೆ.
ಕೇರಳದಾದ್ಯಂತ ಬೀದಿನಾಯಿಗಳ ಕಡಿತ, ರೇಬಿಸ್ ಪ್ರಕರಣ, ಸಾವುಗಳು ವರದಿಯಾಗುತ್ತಿರುವ ಮಧ್ಯೆ ಜಿಲ್ಲೆಯ ಹಲವೆಡೆ ಬೀದಿನಾಯಿಗಳ ಕಾಟ ಜನರನ್ನು ಆತಂಕಕ್ಕೀಡು ಮಾಡಿದೆ. 7ನೇ ತರಗತಿ ತನಕ ಕನ್ನಡ, ಮಲಯಾಳಂ ತರಗತಿಗೆ ಅನೇಕ ವಿದ್ಯಾರ್ಥಿಗಳು ಕುಂಟಿಕಾನ ಹಿರಿಯ ಬುನಾದಿ ಶಾಲೆಗೆ ಆಗಮಿಸುತ್ತಿದ್ದಾರೆ. ಮಕ್ಕಳು ನಡೆದು ಹೋಗುವ ವೇಳೆ ಶ್ವಾನ ಪಡೆ ಬೆದರಿಸಿದ ಘಟನೆಗಳೂ ನಡೆದಿವೆ. ದ್ವಿಚಕ್ರ ಸವಾರರ ಹಿಂದಿನಿಂದ ನಾಯಿಗಳು ಅಟ್ಟಾಡಿಸಿಕೊಂಡು ಬರುತ್ತಿವೆ. ರಾತ್ರಿ ವೇಳೆ ಸಮೀಪದ ಮನೆಗಳಿಗೆ ತೆರಳಿ ಜಗಲಿ, ಇನ್ನಿತರ ಪ್ರದೇಶಗಳನ್ನು ಮಲಿನಗೊಳಿಸುವ ಬಗ್ಗೆ ದೂರುಗಳಿವೆ.
ಮನೆ ಮಂದಿಯ ಚಪ್ಪಲಿ, ಬಟ್ಟೆ ಬರೆಗಳನ್ನು ಎಲ್ಲಿಗಾದರೂ ಎತ್ತಿಕೊಂಡು ಹೋಗಿ ಹಾನಿಗೊಳಿಸುತ್ತಿವೆ. ಶಾಲೆಗೆ ತೆರಳುವ ಮಕ್ಕಳನ್ನು ನಾಯಿಗಳು ಹಿಂಬಾಲಿಸುತ್ತಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.