

IND vs ENG Test: ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ಎದುರು ಸೋತ ಭಾರತ ತಂಡ, ಇದೀಗ ಜುಲೈ 02ರಿಂದ ಪ್ರಾರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯ ಗೆದ್ದು ಬೀಗಲು ಎದುರುನೋಡುತ್ತಿದೆ. ಇದಕ್ಕೆ ಮೈದಾನದಲ್ಲಿ ಅಭ್ಯಾಸ ಕೂಡ ನಡೆಸುತ್ತಿದೆ. ಈ ಮಧ್ಯೆ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಜಾಗದಲ್ಲಿ ನನಗೆ ಮೂವರು ಕ್ಯಾಪ್ಟನ್ ಕಾಣಿಸಿದರು ಎಂದು ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ನಾಲ್ಕನೇ ಇನ್ನಿಂಗ್ಸ್ನಲ್ಲಿ ಭಾರತ ಕೊಟ್ಟ 371 ರನ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪಡೆ, 5 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಕುರಿತಂತೆ ಮಾತನಾಡಿದ ಕಾರ್ತಿಕ್, "ನಾವು ನೆಪಗಳನ್ನು ಹೇಳಬಹುದು. ಆದರೆ, ಸಮಸ್ಯೆ ಏನೆಂದರೆ ತಂಡ ಗಳಿಸಿದ್ದು 835 ರನ್. ಒಬ್ಬ ಬೌಲರ್ ಐದು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಅದರ ಹೊರತಾಗಿಯೂ ತಂಡವು 5 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಇದೆಲ್ಲದರ ನಡುವೆ ಭಾರತ ತಂಡದಲ್ಲಿ ಒಬ್ಬರಿಗಿಂತ ಹೆಚ್ಚು ಕ್ಯಾಪ್ಟನ್ಗಳು ನನಗೆ ಕಾಣಿಸಿದರು. ಇದ್ಯಾಕೆ ಅನ್ನೋದು ನನಗೆ ನಿಜಕ್ಕೂ ಅರ್ಥ ಆಗಲಿಲ್ಲ" ಎಂದರು.
"ಒಂದು ಕಡೆ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ತಂಡದ ಕ್ಯಾಪ್ಟನ್ ಶುಭಮನ್ ಗಿಲ್‌ಗೆ ಏನನ್ನಾದರೂ ಒಂದು ಸೂಚಿಸುತ್ತಿದ್ದರು. ಅದೇನು ಎಂಬುದು ಸರಿಯಾಗಿ ಅರ್ಥವಾಗಲಿಲ್ಲ. ನನ್ನ ಪ್ರಕಾರ, ಒಬ್ಬ ಕ್ಯಾಪ್ಟನ್ ತಂಡವನ್ನು ನಿರ್ವಹಿಸಿದರೆ ಸಾಕು. ಹಿರಿಯ ಆಟಗಾರರು ಏನಾದರೂ ಸರಿ ಅನಿಸಲಿಲ್ಲ ಎಂದರೆ ಒಂದು ಅಥವಾ ಎರಡು ಬಾರಿ ಗಮನಿಸಿ ಹೇಳಬಹುದು. ಆದ್ರೆ, ಪದೇ ಪದೇ ಅಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).