More

    ಮುನಿಸಿಕೊಂಡ ಮುಂಗಾರು – ಮಳೆ ನಂಬಿ ಹೆಸರು ಬಿತ್ತನೆ ಮಾಡಿದ ರೈತ

    ಕುಕನೂರು: ಪ್ರಸಕ್ತ ವರ್ಷದ ಮುಂಗಾರು ಪ್ರಾರಂಭಗೊಂಡಿದ್ದರೂ ಮಳೆ ಬರುವ ಸೂಚನೆ ಕಾಣುತ್ತಿಲ್ಲ. ಈ ಬಾರಿ ಉತ್ತಮ ಮಳೆ ನಿರೀಕ್ಷೆ ಹೊಂದಿದ್ದ ರೈತರಿಗೆ ಮಳೆಯ ವಾಸನೆ ಬಾರದ ಹಿನ್ನೆಲೆಯಲ್ಲಿ ಮೋಡದತ್ತ ಮುಖ ಮಾಡಿದ್ದಾನೆ.

    ಇದನ್ನೂ ಓದಿ: ಮುಂಗಾರು ಮಳೆ ತಡವಾಗಿ ಪ್ರವೇಶಿಸಲಿದೆ; ರೈತರಿಗೆ ಕೃಷಿ ಇಲಾಖೆ ಸಲಹೆ

    ಈಗಾಗಲೆ ಮುಂಗಾರಿನ ಅಶ್ವಿನಿ, ಭರಣಿ, ಕೃತಿಕಾ ಹಾಗೂ ರೋಹಿಣಿ ಮಳೆಗಳು ಬರಬೇಕಾಗಿತ್ತು. ಭರಣಿ, ಕೃತಿಕಾ ಮಳೆಗೆ ರೈತರು ತಮ್ಮ ಜಮೀನುಗಳನ್ನು ಹದಗೊಳಿಸಿ, ರೋಹಿಣಿ ಮಳೆಗೆ ಬಿತ್ತನೆ ಮಾಡಬೇಕಾಗಿತ್ತು. ಆದರೆ, ಆದಲ್ಲಿ ಆಯ್ತು.. ಹೋದಲ್ಲಿ ಹೋಯ್ತು ಎಂಬಂತೆ ಅರೆಬರೆ ಮಳೆಯಾದ ಹಿನ್ನೆಲೆಯಲ್ಲಿ ಕೆಲವು ರೈತರು ಧೈರ್ಯ ಮಾಡಿ ಬಿತ್ತನೆ ಮಾಡಿದ್ದಾರೆ. ಮಳೆ ಬಂದೇ ಬರುತ್ತದೆ ಎನ್ನುವ ಧೈರ್ಯದಿಂದ ಬಿತ್ತನೆ ಮಾಡಿದ ಹೆಸರು ಬೆಳೆ ಮೊಳಕೆ ಒಡೆಯುವ ಮುನ್ನಾ ಕಮರಿ ಹೋಗುತ್ತಿವೆ.

    ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆ ಕಂಡಿದ್ದ ರೈತರು ಈ ಬಾರಿ ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಎರಿ, ಮಸಾರಿ ಭೂಮಿಯನ್ನು ಗುತ್ತಿಗೆ ರೂಪದಲ್ಲಿ ವ್ಯವಸಾಯ ಮಾಡಲು ಸಾಕಷ್ಟು ಉತ್ಸಾಹ ತೋರಿದ್ದರು. ಅದೇ ರೀತಿ ಕೆಲ ಭೂಮಿ ಉಳ್ಳವರು ಗುತ್ತಿಗೆ ರೂಪದಲ್ಲಿ ವರ್ಷಕ್ಕೆ ಪ್ರತಿ ಎಕರೆ 4-5 ಸಾವಿರ ರೂ.ಗೆ ನೀಡಿದ್ದಾರೆ.

    ಭೂಮಿ ನಂಬಿ ಜೀವನ ಸಾಗಿಸುವವರು 10-15 ಎಕರೆವರೆಗೆ ಗುತ್ತಿಗೆ ಪಡೆದು ಭೂಮಿ ಹದಗೊಳಿಸಿ, ಬಿತ್ತನೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಸಾರಿ (ಕೆಂಪು) ಭೂಮಿಯಲ್ಲಿ ಮುಂಗಾರು ಕೈ ಕೊಟ್ಟರೆ ಹಿಂಗಾರು ಬಿತ್ತನೆ ಮಾಡುವುದು ಕಷ್ಟವಾಗುತ್ತದೆ. ಎರಿ ಭೂಮಿ ಮುಂಗಾರು ಕೈಕೊಟ್ಟರು ಸಹ ಹಿಂಗಾರು ಬಿತ್ತನೆ ಮಾಡುವ ನಂಬಿಕೆ ಹೊಂದಿದ್ದಾರೆ.

    ಪ್ರಸಕ್ತ ಬಿತ್ತನೆ ಗುರಿ, ಸಾಧನೆ

    ಕುಕನೂರು ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ 12,956 ಹೆಕ್ಟೇರ್ ಪ್ರದೇಶ ಗುರಿ ನಿಗದಿಯಾಗಿದ್ದು, ಇದರಲ್ಲಿ 50 ಹೆಕ್ಟೇರ್ ಬಿತ್ತನೆಯಾಗಿದೆ. ಹೆಸರು 2,341 ಹೆಕ್ಟೇರ್ ಗುರಿ, 500 ಹೆಕ್ಟೇರ್ ಸಾಧನೆ, ಸೂರ್ಯಕಾಂತಿ 1,791 ಹೆಕ್ಟೇರ್ ಗುರಿ, 30 ಹೆಕ್ಟೇರ್ ಸಾಧನೆಯಾಗಿದ್ದು, ಶೇಂಗಾ 2,346 ಹೆಕ್ಟೇರ್ ಗುರಿ, 50 ಹೆಕ್ಟೇರ್ ಬಿತ್ತನೆಯಾಗಿದೆ. ಸಜ್ಜೆ, ನವಣೆ, ತೊಗರಿ, ಹುರಳಿ ಹಾಗೂ ಹತ್ತಿ ಒಟ್ಟು 22,026 ಹೆಕ್ಟೇರ್ ಗುರಿ ನಿಗದಿಯಾಗಿದ್ದು, ಇದರಲ್ಲಿ 676 ಹೆಕ್ಟೇರ್ ಬಿತ್ತನೆಯಾಗಿದೆ. ಈ ಬಾರಿ ಬರಗಾಲ ಬಂತು ಎನ್ನುವ ಚಿಂತೆ ರೈತರ ಮನದಲ್ಲಿ ಬೇರುರಿದೆ.

    ರೋಹಿಣಿ ಮಳೆ ಅನ್ನ ಹಾಕುವ ಮಳೆ ಎನ್ನುವ ಸಂಪ್ರದಾಯ ನಮ್ಮದಾಗಿದೆ. ಮುಂಗಾರಿನ ರೋಹಿಣಿ ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಬರ ಆವರಿಸುವ ಆತಂಕ ಸೃಷ್ಟಿಯಾಗಿದೆ. ಎರಿ ಭಾಗದಲ್ಲಿ ಈಗಾಗಲೇ ಹೆಸರು, ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬಿತ್ತನೆ ಮಾಡಬೇಕಾಗಿತ್ತು. ಈ ಮಳೆಯಾಗದೇ ಹೋದರೆ ಬರ ಖಂಡಿತ.
    | ಅಂದಪ್ಪ ಕೊಳೂರು, ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ, ಯರೇಹಂಚಿನಾಳ.

    ಹೆಸರು ಬಿತ್ತನೆ ಅಲ್ಪ ಪ್ರಮಾಣದಲ್ಲಿಯಾಗಿದೆ. ಹೆಸರು ಬೆಳೆಯುವ ಕ್ಷೇತ್ರ, ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ ಬಿತ್ತನೆಗೆ ಇನ್ನೂ ಸಮಯವಿದೆ. ರೋಹಿಣಿ ಮಳೆ ಉತ್ತಮವಾಗಿದ್ದರೆ ಹೆಚ್ಚು ಹೆಸರು ಬೆಳೆಯಲು ಸಾಧ್ಯವಾಗುತ್ತಿತ್ತು. ಸದ್ಯ ಮಳೆ ಬಾರದ ಹಿನ್ನೆಲೆಯಲ್ಲಿ ಬಿತ್ತನೆ ನಿರೀಕ್ಷೆ ಹುಸಿಯಾಗಿದೆ.
    | ಬಸವರಾಜ ತೇರಿನ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕುಕನೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts