

Munawar Faruqui : ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್, ಹಿಂದಿ ಬಿಗ್ಬಾಸ್ ಸೀಸನ್ 17ರ ವಿನ್ನರ್ ಮತ್ತು ಹಿಂದು ದೇವರುಗಳನ್ನು ಗೇಲಿ ಮಾಡುವ ಮೂಲಕ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿರುವ ಮುನಾವರ್ ಫಾರುಕಿ, ತಮ್ಮ ಜೀವನದ ಕಹಿ ಘಟನೆಗಳನ್ನು ಇದೀಗ ಮಾದ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
ಜಾನಿಸ್ ಸಿಕ್ವೇರಾ ಅವರ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಮುನಾವರ್, ನನ್ನ ಮಗ ಒಮ್ಮೆ ಕವಾಸಕಿ ಕಾಯಿಲೆಯಿಂದ ಬಳಲುತ್ತಿದ್ದನು ಎಂದಿದ್ದಾರೆ. ಅಲ್ಲದೆ, ಜೀವನದಲ್ಲಿ ಎದುರಾದ ಆರ್ಥಿಕ ಮತ್ತು ಭಾವನಾತ್ಮ ಸ್ಥಿತಿಯನ್ನು ನಿಭಾಯಿಸಲು ಆರಂಭದಲ್ಲಿ ಹೇಗೆ ಹೆಣಗಾಡಿದರು ಎಂಬುದನ್ನು ನೆನಪಿಸಿಕೊಂಡರು.
ಒಂದು ಕಾಲದಲ್ಲಿ ನನಗೆ 75,000 ರೂಪಾಯಿ ಅವಶ್ಯಕತೆ ಇತ್ತು ಆದರೆ, ನನ್ನ ಜೇಬಿನಲ್ಲಿ ಕೇವಲ 700 ರಿಂದ 800 ರೂ. ಮಾತ್ರ ಇತ್ತು. ನನ್ನ ಮಗ ಗುಣವಾಗಲು ಮೂರು ಚುಚ್ಚುಮದ್ದು ನೀಡಬೇಕಾಗಿತ್ತು. ಪ್ರತಿಯೊಂದು ಚುಚ್ಚುಮದ್ದಿನ ಬೆಲೆ 25,000 ರೂ. ಇತ್ತು. ಆ ಪರಿಸ್ಥಿತಿಯಲ್ಲಿ ನನಗೆ ತುಂಬಾ ಭಯವಿತ್ತು. ಆಗ ನನ್ನ ಮಗನಿಗೆ ಕೇವಲ ಒಂದೂವರೆ ವರ್ಷ. 2 ರಿಂದ 3 ದಿನಗಳವರೆಗೆ ಆತನ ಸ್ಥಿತಿ ಸುಧಾರಿಸಲಿಲ್ಲ. ಆತನನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ಆತನಿಗೆ ಕವಾಸಕಿ ಕಾಯಿಲೆ ಇರುವುದು ಪತ್ತೆಯಾಯಿತು.
ಆ ದಿನಗಳಲ್ಲಿ ನಾನು ಆರ್ಥಿಕವಾಗಿ ಉತ್ತಮವಾಗಿರದಿದ್ದರೂ ವೈದ್ಯರ ಮುಂದೆ ಅದನ್ನು ತೋರಿಸಿಕೊಳ್ಳದೇ ವೈದ್ಯರನ್ನು ನೋಡಿ ಮುಗುಳ್ನಕ್ಕಿ, ಹಣದ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದೆ. ಆದರೆ, ನಾನು ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ, ದಿಕ್ಕೇ ತೋಚದಂತಾಗಿ 30 ರಿಂದ 40 ನಿಮಿಷಗಳ ಕಾಲ ಭಾರಿ ಚಿಂತೆಯಲ್ಲಿ ಮುಳುಗಿದೆ. ಇದು ನನ್ನ ಜೀವನದ ಅತ್ಯಂತ ಭಾರವಾದ ಕ್ಷಣ ಎಂದು ಮುನಾವರ್ ಹೇಳಿದರು. ಈ ಹಿಂದೆ ಅವರು ಕೆಲಸ ಮಾಡಿದ ಸ್ಥಳದಿಂದ ಹಣವನ್ನು ಹೊಂದಿಸಿದ್ದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಕವಾಸಕಿ ಕಾಯಿಲೆಯು ಅಪರೂಪದ ಗಂಭೀರವಾದ ಆರೋಗ್ಯ ಸ್ಥಿತಿಯಾಗಿದೆ. ಇದು ಪ್ರಾಥಮಿಕವಾಗಿ 5 ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹೃದಯಕ್ಕೆ ರಕ್ತವನ್ನು ಪೂರೈಸುವ ಪರಿಧಮನಿಗಳು ಸೇರಿದಂತೆ ದೇಹದಾದ್ಯಂತ ರಕ್ತನಾಳಗಳ ವಾಲ್ಗಳಲ್ಲಿ ಉರಿಯೂತ ಉಂಟುಮಾಡುತ್ತದೆ. ಈ ರೋಗವನ್ನು ಮೊದಲೇ ಗುರುತಿಸಿದರೆ ಸುಲಭವಾಗಿ ಗುಣಪಡಿಸಬಹುದು. (ಏಜೆನ್ಸೀಸ್)