

ಮುಂಬೈ: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಪ್ರಧಾನಿ ಮೋದಿಯವರ ಆದಿಯಾಗಿ ಯಾರು ಎಷ್ಟೇ ಹೇಳಿದರೂ ಜನ ಎಚ್ಚೆತ್ತುಕೊಂಡಿಲ್ಲ. ಮೊಬೈಲ್ಗಳಲ್ಲಿ ನಯವಂಚಕರು ಹೆಣೆಯುವ ಮೋಸದ ಜಾಲಕ್ಕೆ ಬಿದ್ದು ಕೋಟಿ ಕೋಟಿ ಕಳೆದುಕೊಳ್ಳುತ್ತಲೇ ಇದ್ದಾರೆ. ಸೈಬರ್ ವಂಚಕರಿಂದ ಮುಂಬೈಜನ ಕಳೆದುಕೊಂಡಿರುವ ಹಣ ಕೇಳಿದರೆ ಎಂಥವರೂ ದಂಗಾಗುವುದು ಖಚಿತ. ಈ ವರ್ಷದ ಜನವರಿಯಿಂದ ಜುಲೈವರೆಗೆ ಸೈಬರ್ ಬರೋಬ್ಬರಿ 650 ಕೋಟಿ ರೂ.ಗಳನ್ನು ಸೈಬರ್ ವಂಚಕರಿಂದ ಕಳೆದುಕೊಂಡಿದ್ದಾರೆ.
ಸೈಬರ್ ಕ್ರೈಂ ಅಧಿಕಾರಿಗಳ ಪ್ರಕಾರ, ಈ ವರ್ಷ ವಿವಿಧ ಸೈಬರ್ ವಂಚನೆಗಳನ್ನು ವರದಿ ಮಾಡುವ ಸಹಾಯವಾಣಿಗೆ 36,000 ಕರೆಗಳು ಬಂದಿವೆ. ಇದರಲ್ಲಿ ಹೆಚ್ಚಿನ ದೂರುಗಳು ಷೇರು ವ್ಯಾಪಾರ ಹೂಡಿಕೆ ವಂಚನೆ, ಫೆಡ್ಎಕ್ಸ್ ಮತ್ತು ಇತರ ಕೊರಿಯರ್-ಸಂಬಂಧಿತ ಹಗರಣಗಳಾಗಿವೆ. ಅದೇ ರೀತಿ ಡಿಜಿಟಲ್ ಅರೆಸ್ಟ್ ವಂಚನೆ, ಆನ್‌ಲೈನ್ ಕಾರ್ಯ ವಂಚನೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ದೂರುಗಳೂ ಹೆಚ್ಚಿಗೆ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.
ಇನ್ನು ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಬ್ಯಾಂಕ್‌ಗಳು, ವ್ಯಾಲೆಟ್ ಪೂರೈಕೆದಾರರು ಮತ್ತು ವ್ಯಾಪಾರಿಗಳು ಸೇರಿದಂತೆ ಪ್ರತಿ ದೂರಿನ ಮೇರೆಗೆ ನೋಡಲ್ ಅಧಿಕಾರಿಗಳೊಂದಿಗೆ ತ್ವರಿತವಾಗಿ ಕಾರ್ಯೋನ್ಮುಖರಾಗಿ ಮೂರನೇ ವ್ಯಕ್ತಿಗಳಿಗೆ ವರ್ಗಾಯಿಸುವ ಮೊದಲು ಬ್ಯಾಂಕ್ ಖಾತೆ ಮಟ್ಟದಲ್ಲಿ 100,84,57,854 ರೂ.ಗಳನ್ನು ಯಶಸ್ವಿಯಾಗಿ ಸ್ಥಗಿತಗೊಳಿಸಿದ್ದಾರೆ ಎಂದು ಅವರು ವಿವರಿಸಿದರು.