ಒಂದು ರೂಪಾಯಿ ನೋಟು ಕೊಟ್ಟು ಬರೋಬ್ಬರಿ 10 ಲಕ್ಷ ರೂ. ಕಳೆದುಕೊಂಡ ವಿಮಾ ಕಂಪನಿಯ ಕ್ಯಾಷಿಯರ್! Mumbai man

Mumbai man
Published on

Mumbai man : ಒಂದು ರೂಪಾಯಿ ನೋಟು ಕೊಟ್ಟರೆ ಭಾರಿ ಬಹುಮಾನ ಕೊಡುವುದಾಗಿ ಸೈಬರ್​ ವಂಚಕರು ಒಡ್ಡಿದ ಆಮಿಷದ ಬಲೆಗೆ ಬಿದ್ದ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯ ಕ್ಯಾಷಿಯರ್, ಬರೋಬ್ಬರಿ 10.38 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ಮುಂಬೈನಲ್ಲಿ ನಡೆದಿದೆ.

ಹಣ ಕಳೆದುಕೊಂಡ ಸಂತ್ರಸ್ತ ಮುಂಬೈನ ಸಾಂತಾಕ್ರೂಜ್ ನಿವಾಸಿ. ವಯಸ್ಸು 45 ವರ್ಷ. ಗುರುವಾರ (ಏಪ್ರಿಲ್​ 17) ಪಶ್ಚಿಮ ಪ್ರದೇಶ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾ ಸಂಸ್ಥೆಯ ಚರ್ಚ್‌ಗೇಟ್ ಶಾಖೆಯಲ್ಲಿ ಕೆಲಸ ಮಾಡುವ ಸಂತ್ರಸ್ತ, ಫೆಬ್ರವರಿ 23ರಂದು ಸಾಮಾಜಿಕ ಜಾಲತಾಣದಲ್ಲಿ ರೀಲ್‌ಗಳನ್ನು ವೀಕ್ಷಿಸುತ್ತಿದ್ದಾಗ ಜಾಹೀರಾತು ಒಂದನ್ನು ನೋಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಒಂದು ರೂಪಾಯಿ ನೋಟು ಇದ್ದರೆ 4.53 ಲಕ್ಷ ರೂ. ಬಹುಮಾನ ನೀಡುವುದಾಗಿ ಜಾಹೀರಾತು ಭರವಸೆ ನೀಡಿತ್ತು. ಅದರಲ್ಲಿ ವಾಟ್ಸ್​ಆ್ಯಪ್​ ಸಂಖ್ಯೆ ಕೂಡ ಇತ್ತು ಎಂದು ಸಂತ್ರಸ್ತ ದೂರಿನಲ್ಲಿ ತಿಳಿಸಿದ್ದಾನೆ.

ಸಂತ್ರಸ್ತ, ವಾಟ್ಸ್​ಆ್ಯಪ್​ ಸಂಖ್ಯೆಗೆ 1 ರೂಪಾಯಿ ನೋಟಿನ ಫೋಟೋ ಕಳುಹಿಸಿದನು. ಇದಾದ ನಂತರ ಪಂಕಜ್ ಸಿಂಗ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಅವನನ್ನು ಸಂಪರ್ಕಿಸಿ, ತಾನು ನಾಣ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದನು. ಫಾರ್ಮ್ ಭರ್ತಿ ಮಾಡಲು ಕೇಳಿ, ನೋಂದಣಿಗಾಗಿ 6,160 ರೂ.ಗಳನ್ನು ಸಂಗ್ರಹಿಸಿದರು. ಸ್ವಲ್ಪ ಸಮಯದ ನಂತರ ಆತ ಮತ್ತೆ ದೂರುದಾರರಿಗೆ ಕರೆ ಮಾಡಿ, ಹಿಂದಿನ ಮೊತ್ತ ತಪ್ಪಾಗಿದೆ ಮತ್ತು 6,107 ರೂ.ಗಳನ್ನು ಮತ್ತೆ ವರ್ಗಾಯಿಸಬೇಕಾಗುತ್ತದೆ ಹೇಳಿದ್ದಾನೆ. ಬಳಿಕ ಸಂತ್ರಸ್ತ ಹಣ ವರ್ಗಾಯಿಸಿದ್ದಾನೆ.

ಇದಾದ ನಂತರ, ಸಿಂಗ್ ಎಂಬಾತ ಅರುಣ್ ಶರ್ಮ ಹೆಸರಿನ ಮತ್ತೊಬ್ಬ ವ್ಯಕ್ತಿಯನ್ನು ಸಂತ್ರಸ್ತನಿಗೆ ಪರಿಚಯಿಸಿದ್ದಾನೆ. ಬಳಿಕ ಶರ್ಮ, ಸಂತ್ರಸ್ತನಿಗೆ "RBI" ಯಿಂದ ಒಂದು ರೂಪಾಯಿ ನೋಟಿಗೆ ಬದಲಾಗಿ ಬಹುಮಾನ ಗೆದ್ದ ಬಗ್ಗೆ ನಕಲಿ ಪತ್ರವನ್ನು ಕಳುಹಿಸಿದ್ದಾರೆ. ಇಬ್ಬರೂ ಕ್ಯಾಷಿಯರ್ ಜೊತೆ ಸಲೀಸಾಗಿ ಮಾತನಾಡಿ, ವಿವಿಧ ನೆಪಗಳನ್ನು ಹೇಳಿ 10.38 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಯು 6 ಲಕ್ಷ ರೂ.ಗಳನ್ನು ಪಾವತಿಸಿದರೆ ಬಹುಮಾನದ ಮೊತ್ತವನ್ನು 25.56 ಲಕ್ಷ ರೂ.ಗಳಿಗೆ ಹೆಚ್ಚಿಸಬಹುದು ಎಂದು ಹೇಳಿದಾಗ ಕ್ಯಾಷಿಯರ್‌ಗೆ ತಾನು ಮೋಸ ಹೋಗಿದ್ದೇನೆ ಎಂದು ಅರಿವಾಗಿದೆ. ಇದಾದ ನಂತರ ಆತ ಪೊಲೀಸರನ್ನು ಸಂಪರ್ಕಿಸಿ, ದೂರು ದಾಖಲಿಸಿದರು. ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net