ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ ಮಾಡಿದ ಮಹಿಳೆ

mumbai airport
ಸಾಂದರ್ಭಿಕ ಚಿತ್ರ
Published on

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್​ನಲ್ಲಿ ಬಾಂಬ್​ ಇದೆ ಎಂದು ಮಹಿಳೆಯೊಬ್ಬಳು ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.

ಕಳೆದ ಸೋಮವಾರ ದಕ್ಷಿಣ ಮುಂಬೈನ 40 ವರ್ಷದ ಗೃಹಿಣಿಯೊಬ್ಬಳು, ಮುಂಬೈ-ಕೋಲ್ಕತ್ತಾ ವಿಮಾನದ ಚೆಕ್-ಇನ್ ಕೌಂಟರ್ ತಲುಪಿದ ನಂತರ ಏರ್​ಪೋರ್ಟ್​ ಸಿಬ್ಬಂದಿಗೆ ಬೋರ್ಡಿಂಗ್ ಪಾಸ್ ಜತೆಗೆ ಎರಡು ಬ್ಯಾಗ್​ಗಳನ್ನು ನೀಡಿದ್ದಾಳೆ.
ಏರ್‌ಲೈನ್‌ನ ನಿಯಮಗಳ ಪ್ರಕಾರ, ಪ್ರಯಾಣಿಕನು ತನ್ನ ಜತೆಗೆ ಗರಿಷ್ಠ 15 ಕೆಜಿ ತೂಕದ ಒಂದು ಬ್ಯಾಗ್​ ಮಾತ್ರ  ತನ್ನೊಂದಿಗೆ ಉಚಿತವಾಗಿ ಒಯ್ಯಬಹುದಾಗಿದೆ.

ಆದರೆ ಈ ವೇಳೆ ಮಹಿಳೆಯ ಬ್ಯಾಗ್​ 22.ಕೆಜಿ ಇದ್ದ ಕಾರಣ ಏರ್​ಪೋರ್ಟ್ ಸಿಬ್ಬಂದಿ ಹೆಚ್ಚುವರಿ ತೂಕಕ್ಕೆ ಹಣ ಪಾವತಿಸುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಮಹಿಳೆಯು, ಸಿಬ್ಬಂದಿಯೊಡನೆ ವಾಗ್ವಾದಕ್ಕೆ ಇಳಿದು ತನ್ನ ಬ್ಯಾಗ್​​ನಲ್ಲಿ ಬಾಂಬ್​ ಇದೆ ಎಂದಿದ್ದಾಳೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿ ಇತರ ಪ್ರಯಾಣಿಕರಿಗೂ ಗಾಬರಿಯನ್ನುಂಟು ಮಾಡಿತು.

ಕೂಡಲೇ ಕರ್ತವ್ಯನಿರತ ಭದ್ರತಾ ಪಡೆ ಸಿಬ್ಬಂದಿ ಆಕೆಯ ಬ್ಯಾಗ್​​ನ್ನು ಪರಿಶೀಲಿಸಿದ್ದು, ಅದರಲ್ಲಿ ಅನುಮಾನಾಸ್ಪದವಾಗಿ ಯಾವ ವಸ್ತುಗಳು ಕಂಡುಬಂದಿಲ್ಲ. ನಂತರ ಮಹಿಳೆಯನ್ನು ಸಹಾರ್ ಪೊಲೀಸರಿಗೆ ಹಸ್ತಾಂತರಿಸಿ ಆಕೆಯ ವಿರುದ್ಧ ಜೀವ ಮತ್ತು ಇತರರ ಸುರಕ್ಷತೆಗೆ ಧಕ್ಕೆ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿದ್ದು, ಗೌಪ್ಯತೆಯ ಕಾರಣದಿಂದಾಗಿ ಪೊಲೀಸರು ಮಹಿಳೆಯ ಗುರುತನ್ನು ಬಿಡುಗಡೆ ಮಾಡಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net