ವಾಟ್ಸ್​ಆ್ಯಪ್​ನಲ್ಲಿದೆ ಸಮಸ್ಯೆ; ಸೈಬರ್ ಸೆಕ್ಯುರಿಟಿ ಏಜೆನ್ಸಿಯಿಂದ ಎಚ್ಚರಿಕೆ

WhatsApp
Published on

ನವದೆಹಲಿ: ಫೇಸ್​ಬುಕ್​ ಸಂಸ್ಥೆಯ ಮಾಲೀಕತ್ವದ ವಾಟ್ಸ್​ಆ್ಯಪ್​ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದರಿಂದ ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದಲ್ಲದೆ, ಅದರಿಂದ ತಮ್ಮ ಖಾಸಗಿತನಕ್ಕೇ ಧಕ್ಕೆ ಬರಲಿದೆ ಎಂದು ಬಳಕೆದಾರರು ಆತಂಕಗೊಂಡಿದ್ದರು. ಇನ್ನು ನಿನ್ನೆಯಿಂದ ವಾಟ್ಸ್​ಆ್ಯಪ್​ ಪಿಂಕ್ ಲಿಂಕ್​ನಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದ ಹಾಗೂ ಅನುಭವಿಸುತ್ತಿರುವ ಬಳಕೆದಾರರು ಇದೀಗ ಇನ್ನೊಮ್ಮೆ ಆತಂಕಪಡುವ ಮತ್ತೊಂದು ಪ್ರಸಂಗ ಎದುರಾಗಿದೆ.

ವಾಟ್ಸ್​ಆ್ಯಪ್​​ ಅಪ್ಲಿಕೇಷನ್​ನಲ್ಲಿ ಬಹಳಷ್ಟು ದೌರ್ಬಲ್ಯಗಳು ಇವೆ ಎಂಬುದಾಗಿ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್ (ಸಿಇಆರ್​ಟಿ) ಎಚ್ಚರಿಕೆ ನೀಡಿದೆ. ವಾಟ್ಸ್​ಆ್ಯಪ್​​ ಹಾಗೂ ವಾಟ್ಸ್​ಆ್ಯಪ್​ ಬಿಜಿನೆಸ್​ ಆ್ಯಪ್​ಗಳ ಪೈಕಿ ಆ್ಯಂಡ್ರಾಯ್ಡ್​ನ v2.21.4.18 ವರ್ಷನ್​ಗೂ ಮೊದಲಿನ ಹಾಗೂ ಐಒಎಸ್​ನ v2.21.32 ವರ್ಷನ್​ಗೂ ಮೊದಲಿನವುಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ ಅದು ತಿಳಿಸಿದೆ.

ಈ ವರ್ಷನ್​ನ ವಾಟ್ಸ್​ಆ್ಯಪ್​ ಹಾಗೂ ವಾಟ್ಸ್​​ಆ್ಯಪ್​​ ಬಿಜಿನೆಸ್​ ಆ್ಯಪ್​ಗಳಿಂದ ಹ್ಯಾಕರ್ಸ್​ ಬಳಕೆದಾರರ ಖಾಸಗಿ ಹಾಗೂ ಸೂಕ್ಷ್ಮ ಮಾಹಿತಿಯನ್ನು ಆ್ಯಕ್ಸೆಸ್​ ಮಾಡಿಕೊಳ್ಳಬಹುದಾಗಿದೆ. ಬಳಕೆದಾರರು ಸುರಕ್ಷತೆ ದೃಷ್ಟಿಯಿಂದ ಗೂಗಲ್​ ಪ್ಲೇ ಸ್ಟೋರ್​ ಹಾಗೂ ಐಒಎಸ್​ ಆ್ಯಪ್​ಸ್ಟೋರ್​ಗೆ ಹೋಗಿ ಲೇಟೆಸ್ಟ್ ವರ್ಷನ್​ ಅಪ್​ಡೇಟ್​ ಮಾಡಿಕೊಳ್ಳುವುದು ಸೂಕ್ತ ಎಂದೂ ಸಿಇಆರ್​ಟಿ ಸಲಹೆ ನೀಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net