ಮೂಲ್ಕಿ ಬೀಚ್‌ಗಳಲ್ಲಿ ಡ್ರಗ್ಸ್ ಹಾವಳಿ : ಶಾಸಕ ಉಮಾನಾಥ ಕೋಟ್ಯಾನ್ ಕಳವಳ : ನಗರ ಪಂಚಾಯಿತಿ ಮಾಸಿಕ ಸಭೆ

New Project (57)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾದ ಮೂಲ್ಕಿ ತಾಲೂಕು ವ್ಯಾಪ್ತಿಯ ಸಸಿಹಿತ್ಲು, ಬಪ್ಪನಾಡು, ಕೊಳಚಿಕಂಬಳ ಬೀಚ್‌ಗಳಲ್ಲಿ ಡ್ರಗ್ಸ್ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಗ್ಗೆ ದೂರು ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶನಿವಾರ ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆಗೆ ಆಗಮಿಸಿ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಶಾಸಕರಿಗೆ 10 ಕೋಟಿ ರೂ. ಅನುದಾನ ಬಂದಿದ್ದು ಮೂಲ್ಕಿ ನಗರ ಪಂಚಾಯಿತಿಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಮೂಲ್ಕಿ ಜನರ ಉಪಯೋಗಕ್ಕಾಗಿ ಬಪ್ಪನಾಡಿನಿಂದ ಮೂಲ್ಕಿ ಬಸ್ ನಿಲ್ದಾಣದವರೆಗೆ ಸರ್ವೀಸ್ ರಸ್ತೆ ಮಂಜೂರಾಗಿದ್ದು ಕಾಮಗಾರಿ ಕೂಡಲೇ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು. ಕೆ.ಎಸ್.ರಾವ್ ನಗರದ ಕುಡಿಯುವ ನೀರಿನ ಸಮಸ್ಯೆಗೆ 5 ಲಕ್ಷ ರೂ. ಅನುದಾನ ನೀಡಿರುವ ಶಾಸಕರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಮಳೆಗಾಲದಲ್ಲಿ ಮಾರಕ ಸೋಂಕು ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು ಸ್ವಚ್ಛತೆ ಕಾಪಾಡಿ ಎಂದು ವೈದ್ಯಾಧಿಕಾರಿ ಡಾ. ಕೃಷ್ಣ ಹೇಳಿದರು. ಸರ್ಕಾರಿ ಆಸ್ಪತ್ರೆಯ ಎದುರು ಭಾಗದಲ್ಲಿ ಬಸ್ ತಂಗುದಾಣ ನಿರ್ಮಾಣದ ಬಗ್ಗೆ ಚರ್ಚೆ ನಡೆಯಿತು. ಸದಸ್ಯ ಶೈಲೇಶ್ ಕುಮಾರ್ ಮಾತನಾಡಿ, ಕೆ.ಎಸ್.ರಾವ್ ನಗರದಲ್ಲಿ ಮೂಲಸೌಕರ್ಯ ವಂಚಿತ ನಮ್ಮ ಕ್ಲಿನಿಕ್ ಆರೋಗ್ಯ ಕೇಂದ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿ ಮೂಲಸೌಕರ್ಯ ಒದಗಿಸಲು ಒತ್ತಾಯಿಸಿದರು.

ಸದಸ್ಯ ಪುತ್ತುಬಾವ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ರಾತ್ರಿ ಹೊತ್ತು ಅಪಘಾತದ ಗಾಯಾಳುಗಳು ಚಿಕಿತ್ಸೆಗೆ ಬಂದರೆ ವೈದ್ಯಾಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಎಂಬ ದೂರುಗಳಿವೆ ಎಂದರು. ಮುಖ್ಯಾಧಿಕಾರಿ ಮಧುಕರ್ ಮಾತನಾಡಿ, ಕಾರ್ನಾಡು ಗಾಂಧಿ ಮೈದಾನ, ಸಮುದಾಯ ಭವನದ ಹಿಂಭಾಗ ಗಾಂಜಾ ಮತ್ತಿತರ ದಂಧೆಗಳು ನಡೆಯುತ್ತಿದ್ದು ಮಟ್ಟ ಹಾಕಬೇಕು ಎಂದರು. ಎಎಸ್‌ಐ ಸಂಜೀವ ಉತ್ತರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನ.ಪಂ. ವ್ಯಾಪ್ತಿಯ ಚಿತ್ರಾಪುನಲ್ಲಿ ಉಪ್ಪು ನೀರಿನ ಸಮಸ್ಯೆ ಬಗ್ಗೆ ಸದಸ್ಯರಾದ ಯೋಗೀಶ್ ಕೋಟ್ಯಾನ್, ರಾಧಿಕಾ ಕೋಟ್ಯಾನ್ ಪ್ರಸ್ತಾಪಿಸಿ ಕೃಷಿ ಹಾನಿ ತಡೆಗೆ ಕಿಂಡಿ ಅಣೆಕಟ್ಟು ದುರಸ್ತಿ ನಡೆಸಲು ಒತ್ತಾಯಿಸಿದರು.ಪ್ರವಾಹ ನಿಯಂತ್ರಣ ಮುಂಜಾಗ್ರತೆ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ ಮಾತನಾಡಿದರು. ಸದಸ್ಯರಾದ ಮಂಜುನಾಥ ಕಂಬಾರ, ವಂದನಾ ಕಾಮತ್, ದಯಾವತಿ ಅಂಚನ್, ರಾಧಿಕಾ ಕೋಟ್ಯಾನ್, ಲೋಕೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.

ಕಾಂಡ್ಲವನದಿಂದ ಕೃತಕ ನೆರೆ

ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ, ಮೂಲ್ಕಿ ಬಸ್‌ಸ್ಟಾೃಂಡ್ ಜಂಕ್ಷನ್ ಬಳಿ ಹೆದ್ದಾರಿ ದಾಟಲು ಅಪಾಯಕಾರಿಯಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಮಾನಂಪಾಡಿ ತೋಡಿನಲ್ಲಿ ಕಾಂಡ್ಲವನದಿಂದ ಕೃತಕ ನೆರೆ ಉಂಟಾಗಿ ಕೃಷಿ ಹಾನಿ ಸಂಭವಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳನ್ನು ಸದಸ್ಯ ತಿಲಕ್ ಹಾಗೂ ಸುಭಾಷ್ ಶೆಟ್ಟಿ ಒತ್ತಾಯಿಸಿದರು. ಮೂಲ್ಕಿಯಿಂದ ಉಡುಪಿ ಕಡೆಗೆ ಹೋಗುವ ವಾಹನ ಸವಾರರಿಗೆ ಹೆಜಮಾಡಿ ಟೋಲ್‌ನಲ್ಲಿ ರಿಯಾಯಿತಿ ಬಗ್ಗೆ ಸದಸ್ಯರು ಹೆದ್ದಾರಿ ಇಲಾಖೆ ಅಧಿಕಾರಿಯನ್ನು ಆಗ್ರಹಿಸಿದರು.

ಸವಲತ್ತು ವಿತರಣೆ ಸದಸ್ಯರ ಗಮನಕ್ಕೆ

ಸದಸ್ಯ ಬಾಲಚಂದ್ರ ಕಾಮತ್ ಮಾತನಾಡಿ, ಸುಮಾರು 20 ಮನೆಗಳಿರುವ ನ.ಪಂ. ವ್ಯಾಪ್ತಿಯ ಚಂದ್ರ ಶಾನುಭಾಗರ ಕುದ್ರುವಿಗೆ ಸಂಪರ್ಕ ಸೇತುವೆ ಹಾಗೂ ಮೂಲಸೌಕರ್ಯ ಒದಗಿಸಲು ಒತ್ತಾಯಿಸಿದರು. ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುವಾಗ ವಾರ್ಡ್‌ನ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯ ಪುತ್ತುಭಾವ ಹೇಳಿದರು. ನಗರ ಪಂಚಾಯಿತಿ ವ್ಯಾಪಾರ ಉದ್ಯಮಿಗಳಿಗೆ ಘನ ತ್ಯಾಜ್ಯ ಸೇವಾ ಶುಲ್ಕ ಹೆಚ್ಚಳದ ಬಗ್ಗೆ ಸಭೆಯಲ್ಲಿ ಅನುಮೋದಿಸಲಾಯಿತು. ಲಿಂಗಪ್ಪಯ್ಯ ಕಾಡು ಬಾಬು ಜಗಜೀವನ್ ರಾಮ್ ಗ್ರಂಥಾಲಯ ಅಭಿವೃದ್ಧಿ, ಮಲ್ಲಿಕಾರ್ಜುನ ಮಠದ ಬಳಿ ಚರಂಡಿ ಅವ್ಯವಸ್ಥೆ ಬಗ್ಗೆ ಸದಸ್ಯ ಭೀಮಾಶಂಕರ್ ಪ್ರಸ್ತಾಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net