

ವಿಜಯವಾಣಿ ಸುದ್ದಿಜಾಲ ಕಡಬ
ಕಡಬ ತಾಲೂಕಿನ ಕುಂತೂರು, ಪೆರಾಬೆ, ಆಲಂಕಾರು, ಕೊಯಿಲ, ರಾಮಕುಂಜ, ಹಳೆನೇರೆಂಕಿ, ಸವಣೂರು, ಕಾಣಿಯೂರು, ಬೆಳಂದೂರು ಮೊದಲಾದ ಗ್ರಾಮಗಳಲ್ಲಿ ಶುಕ್ರವಾರ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿದಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಕಂಡು ಕೇಳರಿಯದಷ್ಟರ ಮಟ್ಟಿಗೆ ಮಳೆ ಭೋರ್ಗರೆತದಿಂದ ಹಳ್ಳ, ತೊರೆಗಳು ಉಕ್ಕಿ ಹರಿದು ಕೃಷಿ ತೋಟಗಳಿಗೆ ಹಾನಿಯಾಗಿದೆ. ಹಲವೆಡೆ ರಸ್ತೆಗಳಿಗೆ ಮರಗಳು ಬುಡಸಮೇತ ಬಿದ್ದಿವೆ. ರಸ್ತೆಗಳಿಗೆ ಮಣ್ಣು ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ಹಲವು ಮನೆಗಳ ಪಕ್ಕದ ಧರೆಗಳು ಕುಸಿದಿದ್ದು, ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಸಂಬಂಧಪಟ್ಟ ಇಲಾಖೆಯವರು, ಅಧಿಕಾರಿಗಳು, ಜನಪ್ರತಿಧಿಗಳು ಸಮರೋಪಾದಾದಿಯಲ್ಲಿ ತುರ್ತು ಕಾಮಗಾರಿ ನಡೆಸಿ ಸಮಸ್ಯೆ ಪರಿಹರಿಸಲು ಶ್ರಮಿಸುತ್ತಿದ್ದಾರೆ.
ಕೊಯಿಲ ಗ್ರಾಮದ ಏಣಿತ್ತಡ್ಕ ಭಾಗದಲ್ಲಿ ನಿರಂಜನ ನಾಯ್ಕ, ವಿಠಲ ನಾಯ್ಕ ಅವರ ಮನೆ ಪಕ್ಕದಲ್ಲಿ ಧರೆ ಕುಸಿದಿದೆ. ಕುಮಾಧಾರಾ ನದಿ ಪಕ್ಕದಲ್ಲಿದ್ದ ದಯಾನಂದ ನಾಯ್ಕ ಎಂಬುವರ ಅಡಕೆ ಗಿಡಗಳು ನೀರು ಪಾಲಾಗಿವೆ. ಕೊಲ್ಯ ದಿನೇಶ್ ಗೌಡ ಎಂಬುವರ ಮನೆ, ದನದ ಕೊಟ್ಟಿಗೆ ಹಿಂಭಾಗದ ಧರೆ ಕುಸಿದು ಕೊಟ್ಟಿಗೆ ಹಾನಿಯಾಗಿದೆ. ಬಾಲಕೃಷ್ಣ ಎಂಬುವರ ಮನೆ ಹಿಂಭಾಗ ಧರೆ ಕುಸಿದಿದೆ. ಸಾಂತಪ್ಪ ಗೌಡರ ಮನೆಯಂಗಳ ಪಕ್ಕದ ತೋಟಕ್ಕೆ ಕುಸಿದು ಅಡಕೆ ಗಿಡ, ತೆಂಗು ಧರಶಾಯಿಯಾಗಿವೆ. ದನದ ಕೊಟ್ಟಿಗೆ ಅಪಾಯ ಸ್ಥಿತಿಯಲ್ಲಿದೆ. ಸದಾನಂದ ಗೌಡ ಕೊಲ್ಯ ಅವರ ಕುಮಾರಧಾರಾ ನದಿ ಪಕ್ಕದಲ್ಲಿದ್ದ 50 ಅಡಕೆ ಗಿಡ ನದಿ ನೀರಿಗೆ ಕೊಚ್ಚಿ ಹೋಗಿದೆ. ಕುಮಾರಧಾರಾ ನದಿ ಸನಿಹದಲ್ಲಿರುವ ಬೃಹದಾಕಾರದ ತೋಡಿನ ಪಕ್ಕದಲ್ಲಿರುವ ಓಕೆ ನಿವಾಸಿ ರಂಜಿನಿ ಮನೆಯ ಹಿಂಭಾಗದ ಮಣ್ಣು ಕುಸಿದು ಮನೆ ಅಪಾಯ ಸ್ಥಿತಿಯಲ್ಲಿದೆ. ಓಕೆ ನಿವಾಸಿ ಬಾಲಕೃಷ್ಣ ಮನೆ ಪಕ್ಕ ಕುಮಾರಧಾರಾ ನದಿ ಸಮೀಪದ 10ಕ್ಕೂ ಹೆಚ್ಚು ಅಡಕೆ ಗಿಡಗಳು ನದಿ ಪಾಲಾಗಿವೆ.
ತೋಡು ಜರಿದು ಕೃಷಿ ಭೂಮಿಗೆ ನೀರು
ಸುರೇಶ್ ಓಕೆ ಅವರ ಕೃಷಿ ನಾಶವಾಗಿದೆ. ತಿಮ್ಮಪ್ಪ ಗೌಡ ಓಕೆ ಎಂಬುವರ ಮನೆ ಪಕ್ಕದ ಧರೆ ಕುಸಿದಿದೆ. ಕಡೆಂಬ್ಯಾಲು ನಿವಾಸಿ ಜನಾರ್ದನ ಗೌಡರ ಮನೆ ಸಂಪರ್ಕ ರಸ್ತೆಗೆ ಮಣ್ಣು ಕುಸಿದು ಬಿದ್ದಿದೆ. ಪದ್ಮಯ ಗೌಡ ಸಬಳೂರುರವರ ಮನೆಯ ಸಂಪರ್ಕ ರಸ್ತೆಗೆ ಅಪಾರ ಪ್ರಮಾಣದ ಮಣ್ಣು ಕುಸಿದಿದೆ. ಚೆನ್ನಪ್ಪ ಗೌಡ ಬರೆಮೇಲು, ಕುಶಾಲಪ್ಪ ಗೌಡ ಕಟ್ಟಾತ್ತಾರವರ ಮನೆ ಪಕ್ಕದ ತೋಡಿಗೆ ಮಣ್ಣು ಬಿದ್ದು, ಕೃಷಿ ತೋಟದಲ್ಲಿ ನೀರು ತುಂಬಿಕೊಂಡಿದೆ. ತೋಡು ಜರಿದು ಕೃಷಿ ಭೂಮಿಗೆ ನೀರು ತುಂಬಿದೆ. ಏರ್ಮಡ್ಕ ಎಂಬಲ್ಲಿ ರಸ್ತೆಗೆ ಬರೆ ಜರಿದು ಸಂಚಾರ ಬಂದ್ ಆಗಿದ್ದು, ಸಂಜೆ ವೇಳೆಗೆ ಸ್ಥಳೀಯಾಡಳಿತದಿಂದ ತೆರವುಗೊಳಿಸಲಾಗಿದೆ. ಎರ್ಮಡ್ಕ ಧನಂಜಯ ಎಂಬುವರ ಮನೆ ಹಿಂಭಾಗದಲ್ಲಿ ಹರಿಯುವ ಬೃಹದಾಕಾರದ ತೋಡಿಗೆ ಮನೆ ಹಿಂಭಾಗದ ಮಣ್ಣು ಕುಸಿದು ಮನೆ ಅಪಾಯ ಸ್ಥಿತಿಯಲ್ಲಿದೆ.
ಜೆಸಿಬಿ ಮೂಲಕ ಮಣ್ಣು ತೆರವು
ಭವಾನಿ ಗೌಡ ಪರಂಗಾಜೆ ಎಂಬುವರ ಮನೆ ಬಳಿ ಧರೆ ಕುಸಿದು ಕೃಷಿಗೆ ಹಾನಿಯಾಗಿದ್ದು, ರಸ್ತೆ ಸಂಪೂರ್ಣ ಬಂದ್ ಆಗಿದೆ. ಪೊಸಲಕ್ಕೆ ವೆಂಕಪ್ಪ ಗೌಡ ಎಂಬುವರ ಮನೆ ಪಕ್ಕದ ಧರೆ ಕುಸಿದು ಗೋಡೆಗೆ ಹಾನಿಯಾಗಿದೆ. ಘಟನೆ ಸಂದರ್ಭ ಅಪಾಯ ಅರಿತು ಮನೆ ಮಂದಿಯನ್ನು ರಾತ್ರಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸುರೇಶ್ ಶೆಟ್ಟಿ ಕಲ್ಕಾಡಿ ಅವರ ಮನೆ ಪಕ್ಕದ ಧರೆ ಕುಸಿದು ಮನೆಯೊಳಗೆ ಮಣ್ಣು ಸಂಗ್ರಹವಾಗಿದೆ. ಗಂಡಿಬಾಗಿಲು ಎಂಬಲ್ಲಿ ಹಿಮಾಯುತಲ್ ಇಸ್ಲಾಂ ಮದ್ರಸಾದ ಹಿಂಭಾಗದ ಧರೆ ಕುಸಿದಿದೆ. ಕಾಯರಕಟ್ಟ ತನಿಯಪ್ಪ ಗೌಡ ಅವರ ಮನೆ ಹಿಂಭಾಗ ಧರೆ ಕುಸಿದು ಮನೆ ಗೋಡೆ, ಛಾವಣಿಗಳಿಗೆ ಹಾನಿಯಾಗಿದೆ. ಪಕ್ಕದಲ್ಲಿರುವ ದೈವಸ್ಥಾನದ ಕಾಂಪೌಂಡ್‌ಗೆ ಹಾನಿಯಾಗಿದೆ. ಘಟನಾ ಸ್ಥಳಗಳಿಗೆ ಕೊಯಿಲ ಗ್ರಾಪಂ ಉಪಾಧ್ಯಕ್ಷ ಯತೀಶ್ ಸಬಳೂರು, ಸದಸ್ಯರಾದ ಚಿದಾನಂದ ಪಾಣಿಯಲ್, ಹರ್ಷಿತ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ಶೇಷಾದ್ರಿ, ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವಾರು ಕಡೆಗಳಲ್ಲಿ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ನಡೆಸುತ್ತಿದ್ದಾರೆ.
ನೀರುಣಿಸುವ ಪೈಪುಗಳಿಗೆ ಹಾನಿ
ಆಲಂಕಾರು ಗ್ರಾಮದ ಕಕ್ವೆ ಪರಿಸರದಲ್ಲಿ ಸುರಿದ ಧಾರಾಕಾರ ಮಳೆಗೆ ಕಕ್ವೆ ಪದ್ಮಯ್ಯ ಗೌಡ, ಶಿವಣ್ಣ ಗೌಡ ಅವರ ತೋಟಕ್ಕೆ ಹಾನಿಯಾಗಿದೆ. ಪದ್ಮಯ್ಯ ಗೌಡರ ತೋಟದ ಪಕ್ಕದಲ್ಲಿ ಹರಿಯಿತ್ತಿದ್ದ ಕಣಿಯಿಂದ ನೀರು ಉಕ್ಕಿ ಹರಿದಿದೆ. ಜತೆಗೆ ಪಕ್ಕದ ರಸ್ತೆಯಲ್ಲಿ ಹರಿದ ನೀರು ಒಟ್ಟಾಗಿ ಹರಿದ ಪರಿಣಾಮ ರಸ್ತೆಯ ಒಂದು ಭಾಗ ಕೊಚ್ಚಿಕೊಂಡು ಹೋಗಿ 10ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ. ಪದ್ಮಯ್ಯ ಗೌಡರ 100ಕ್ಕೂ ಹೆಚ್ಚು ಫಸಲುಭರಿತ ಅಡಕೆ ಗಿಡ ನೀರು ಪಾಲಾಗಿದೆ. ಶಿವಣ್ಣ ಗೌಡರ ಫಸಲು ಭರಿತ 400ಕ್ಕೂ ಹೆಚ್ಚು ಗಿಡಗಳ ಮಧ್ಯೆ ಕೆಸರು ನೀರು ತುಂಬಿಕೊಂಡಿದೆ. ಕೃಷಿಗೆ ನೀರುಣಿಸುವ ಪೈಪುಗಳಿಗೆ ಹಾನಿಯಾಗಿದೆ. ತೋಟಕ್ಕೆ ನೀರುಣಿಸಲು ಇದ್ದ ಬೃಹದಾಕಾರದ ಕೆರೆ ಸಂಪೂರ್ಣ ಮಣ್ಣು ತುಂಬಿಕೊಂಡು ಮುಚ್ಚಿ ಹೋಗಿದೆ. ತೋಟದ ಪಕ್ಕದಲ್ಲಿದ್ದ ಮರಗಳು, ಅಡಕೆ ಗಿಡಗಳು ಧರಶಾಯಿಯಾಗುತ್ತಲೇ ಇದೆ. ಮಳೆ ಪ್ರಮಾಣ ಹೆಚ್ಚಿದಲ್ಲಿ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಶಿವಣ್ಣ ಗೌಡ ಬಾಳ್ತಿಕುಮೇರು ಎಂಬುವರ ಮನೆ ಹಿಂಭಾಗ ಮಣ್ಣು ಕುಸಿದು ಮನೆ ಗೋಡೆಗೆ ಹಾನಿಯಾಗಿದ್ದು, ಮನೆಯೊಳಗೆ ಕೆಸರು ಸಂಗ್ರಹವಾಗಿದೆ. ವಿಶ್ವನಾಥ ಕಕ್ವೆ ಅವರ ಮನೆಯ ಪಕ್ಕ ಧರೆ ಕುಸಿದು ಪಂಪು ಶೆಡ್ಡು ಮಣ್ಣಿನೊಳಗೆ ಹೂತು ಹೋಗಿದೆ.
ನೀರು ಉಕ್ಕಿ ಹರಿದು ಅಡಕೆ ತೋಟ ನಾಶ
ಸುಧಾಕರ ಕಕ್ವೆ ಅವರ ಕೃಷಿ ತೋಟದ ಮಧ್ಯೆ ಇದ್ದ ತೋಡಿನಲ್ಲಿ ನೀರು ಉಕ್ಕಿ ಹರಿದು ಅಡಕೆ ತೋಟ ನಾಶವಾಗಿದೆ. ಪರಮೇಶ್ವರ ಕಕ್ವೆ ಅವರ ಮನೆ, ಕೃಷಿ ತೋಟಕ್ಕೆ ಹಾನಿಯಾಗಿದೆ. ಇದೇ ಪರಿಸರದಲ್ಲಿದ್ದ ಕಕ್ವೆ ಕುಟುಂಬಸ್ಥರ ದೈವಸ್ಥಾನದ ಕಾಂಪೌಂಡು ಕುಸಿತವಾಗಿದೆ. ಆಲಂಕಾರು ಪೇಟೆಯಲ್ಲಿರುವ ಹಾಲಿನ ಸೋಸೈಟಿ ಪಕ್ಕದ ಧರೆ ಕುಸಿದ ಪರಿಣಾಮ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ಬೈಕ್‌ಗಳು ಮಣ್ಣಿನಲ್ಲಿ ಹುದುಗಿ ಹೋಗಿವೆ. ಘಟನಾ ಸ್ಥಳಗಳಿಗೆ ಆಲಂಕಾರು ಗ್ರಾಪಂ ಅಧ್ಯಕ್ಷೆ ಸುಶೀಲಾ, ಸದಸ್ಯೆ ಶಾರದಾ, ಗ್ರಾಮ ಆಡಳಿತಾಧಿಕಾರಿ ಪ್ರೇಮಲತಾ, ಪಿಡಿಒ ಸುಜಾತಾ ಮತ್ತು ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಸಂಚಾರಕ್ಕೆ ತೊಡಕು
ಪೆರಾಬೆ ಗ್ರಾಪಂ ವ್ಯಾಪ್ತಿಯ ಕುಂತೂರು ಪೇಟೆಯಲ್ಲಿ ಕುಶಾಲಪ್ಪ ಗೌಡ ಅವರ ಮನೆಯ ಒಂದು ಬದಿಯ 10 ಅಡಿ ಎತ್ತರದ ಆವರಣಗೋಡೆ ಕುಸಿದು ಪಕ್ಕದ ಚಂದ್ರಶೇಖರ ರೈ ಮಾಲೀಕತ್ವದ ಸೋನಿಕ್ ಕಾಂಪ್ಲೆಕ್ಸ್‌ನ ಗೋಡೆ ಮೇಲೆ ಬಿದ್ದಿದೆ. ಕಾಂಪ್ಲೆಕ್ಸ್‌ನಲ್ಲಿ ಅಂಗಡಿ ಹಾಗೂ ಮನೆಗಳಿದ್ದು ಅವುಗಳ ಗೋಡೆಗೂ ಹಾನಿಯಾಗಿದೆ. ಕಾಣಿಯೂರು ಪೇಟೆಯಲ್ಲಿ ಚರಂಡಿಯಲ್ಲಿ ಉಕ್ಕಿ ಹರಿದ ನೀರಿನಿಂದ ರಸ್ತೆಯಲ್ಲಿ ನೀರು ನಿಂತಿತ್ತು. ಕಜೆಬಾಗಿಲು ಎಂಬಲ್ಲಿ ತೋಡಿನ ನೀರು ರಸ್ತೆಗೆ ಆವರಿಸಿ ಸಂಚಾರಕ್ಕೆ ತೊಡಕಾಯಿತು. ಪುಣ್ಚತ್ತಾರು ಪೇಟೆಯಲ್ಲಿ ತೋಡಿನ ನೀರು ರಸ್ತೆಗೆ ಆವರಿಸಿ ಹಲವು ಗಂಟೆಗಳ ಕಾಲ ಸಂಚಾರ ಬಂದ್ ಆಯಿತು. ಪೇಟೆಯ ಹಲವು ಅಂಗಡಿಗಳಿಗೆ ನೆರೆ ನೀರು ನುಗ್ಗಿದೆ. ಕಾಣಿಯೂರು ಪೇಟೆ ಸಮೀಪದ ಬೈತ್ತಡ್ಕ ಎಂಬಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕುಸಿತ ಉಂಟಾಗಿದೆ.