ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಬ್ರಹ್ಮಾವರ ತಾಲೂಕಿನ ಕರ್ಜೆ ಗ್ರಾಪಂ ವ್ಯಾಪ್ತಿಯ ಕನ್ನಾರು ಸಮೀಪದ ಮುಡೂರಿನ 15 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಭಾರಿ ಮಳೆಗೆ ಮಣ್ಣು ಸಡಿಲಗೊಂಡು ವಾಹನಗಳು ಸಂಚರಿಸದಂತೆ ಹದಗೆಟ್ಟಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ಮಕ್ಕಳು, ಹೈನುಗಾರರು, ಕೂಲಿ ಕಾರ್ಮಿಕರು, ಸಾರ್ವಜನಿಕರು ಸಂಚರಿಸುತ್ತಾರೆ. ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆಯೇ ಹರಿಯುವುದರಿಂದ ವಾಹನಗಳು ಹೂತು ಹೋಗುವಷ್ಟು ಗುಂಡಿಗಳಾಗಿವೆ. ರಸ್ತೆ ಬದಿಯಲ್ಲಿ ಆಳೆತ್ತರದ ಪೊದೆಗಳು ಬೆಳೆದು ನಿಂತಿದೆ. ಕೇವಲ ಒಂದು ಕಿಮಿ ಮಣ್ಣಿನ ರಸ್ತೆಯನ್ನು ಸಂಪೂರ್ಣ ಡಾಂಬರಿಕರಣಗೊಳಿಸಿ, ಬೀದಿದೀಪ, ಸೂಕ್ತ ಚರಂಡಿ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ರಸ್ತೆಯಲ್ಲಿ ಡಿಸೆಂಬರ್ ತಿಂಗಳ ತನಕ ಯಾವುದೇ ವಾಹನ ಬರುವುದಿಲ್ಲ. ಗ್ಯಾಸ್, ರೇಷನ್ ತಂದು ವಾಹನದವರು ಒಂದು ಕಿಮಿ ಹಿಂದೆಯೇ ಇಟ್ಟು ಹೋಗುತ್ತಾರೆ. ಅಲ್ಲಿಂದ ಮನೆಯ ತನಕ ಹೊತ್ತು ತರಬೇಕು. ಯಾವುದೇ ರಿಕ್ಷಾದವರು ಬಾಡಿಗೆಗೆ ಬರಲು ಒಪ್ಪುವುದಿಲ್ಲ.
-ಸವಿತಾ ಮುಡೂರು ಸ್ಥಳೀಯ ನಿವಾಸಿ
ಸುಮಾರು ಐದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿ ಕಾಲಿನ ಸರ್ಜರಿ ಆಗಿದೆ. ಇನ್ನು ಎರಡು ಆಗಬೇಕಿದೆ. ಈ ರಸ್ತೆ ಪರಿಸ್ಥಿತಿ ನೋಡಿ ಸದ್ಯಕ್ಕೆ ಮುಂದೂಡಿದ್ದೇನೆ. ಆಸ್ಪತ್ರೆಗೆ ಹೋಗಿ ಬರಲು ಯಾವುದೇ ವಾಹನದವರು ಬರಲು ಒಪ್ಪುತ್ತಿಲ್ಲ.
-ರತಿ ಶೆಡ್ತಿ ಅನಾರೋಗಸ್ಥ ಮುಡೂರು ನಿವಾಸಿ