

ಹೆಬ್ರಿ: ಸನಾತನ ಧರ್ಮದ ಸಂಸ್ಕೃತಿಯನ್ನು ಹೊಂದಿರುವ ಭಾರತದ ಕುಟುಂಬ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಕೃಷಿ ವ್ಯವಸ್ಥೆಯನ್ನು ಹಾಳು ಮಾಡುವುದೇ ಬ್ರಿಟಿಷರ ಉದ್ದೇಶವಾಗಿತ್ತು. ಮೆಕಾಲೆ ಶಿಕ್ಷಣ ಪದ್ಧತಿಯು ನಮಗೆ ಬದುಕಿನ ಪಾಠಗಳನ್ನು ಹೇಳಿಕೊಡುವಲ್ಲಿ ವಿಫಲವಾಗಿದೆ. ನಮ್ಮ ಸಂಸ್ಕೃತಿಯ ಬೇರುಗಳು ಸದೃಢವಾಗಬೇಕಾದರೆ ಬಾಲ್ಯದಲ್ಲಿ ಪಡೆಯುವ ಶಿಕ್ಷಣ ಅತಿ ಮುಖ್ಯ ಎಂದು ಕಾರ್ಕಳದ ವಾಗ್ಮಿ ರಮಿತಾ ಶೈಲೇಂದ್ರ ಹೇಳಿದರು.
ಮುದ್ರಾಡಿ ಸುಬ್ಬಣ್ಣಕಟ್ಟೆಯ ಸೇವಾಸಂಗಮ ಶಿಶುಮಂದಿರದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೌದ್ಧಿಕ ಉಪನ್ಯಾಸವನ್ನು ನೀಡಿದರು.
ಶಿಶುಮಂದಿರಗಳಲ್ಲಿ ಗುರುಕುಲ ಪದ್ಧತಿಯ ಶಿಕ್ಷಣ ಮಕ್ಕಳಿಗೆ ದೊರಕುತ್ತಿದೆ. ಅದರ ಪ್ರಯೋಜನವನ್ನು ಅರಿತುಕೊಂಡು ತಾಯಂದಿರು ಶಿಶುಮಂದಿರದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಸಮಾಜದ ಆಸ್ತಿ ಯನ್ನಾಗಿ ಮಾಡಬೇಕು ಎಂದು ಹೇಳಿದರು.
ಸೇವಾಸಂಗಮ ಶಿಶುಮಂದಿರ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು. ಮಾತೆಯರು ಎಲ್ಲ ಮಕ್ಕಳಿಗೆ ಅರಿಶಿನ, ಕುಂಕುಮ ಹಚ್ಚಿ, ಅಕ್ಷತೆ ಹಾಕಿ, ಆರತಿ ಬೆಳಗಿ ಹರಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರ ನಡೆಯಿತು.
ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ, ಹೆಬ್ರಿ ಅಮೃತ ಭಾರತಿ ಟ್ರಸ್ಟ್ ವಿಶ್ವಸ್ಥರಾದ ಬಾಲಕೃಷ್ಣ ಮಲ್ಯ, ನಿವೃತ್ತ ಮುಖ್ಯ ಶಿಕ್ಷಕ ಗಣಪತಿ ಪೈ, ಶಿಶುಮಂದಿರ ವ್ಯವಸ್ಥಾಪಕಿ ಶಿಲ್ಪಾ ಶ್ರೀಧರ ನಾಯಕ್ ಉಪಸ್ಥಿತರಿದ್ದರು. ಸೇವಾಸಂಗಮದ ಸಂಚಾಲಕ ಶ್ರೀಧರ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮತಿ ವರದಿ ಮಂಡಿಸಿದರು. ಪೂರ್ವಿ ಪ್ರಶಾಂತ್ ಪೈ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪೂರ್ಣಿಮಾ ಆರ್.ಭಟ್ ವಂದಿಸಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿದರು.