

ರಾಂಚಿ: ಮಹೇಂದ್ರ ಸಿಂಗ್ ಧೋನಿ(MS Dhoni) ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಧೋನಿ ಅವರ ನಾಯಕತ್ವದಲ್ಲಿ ಭಾರತವು ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದೆ. 2020 ಆಗಸ್ಟ್ 15ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಆದರೂ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಧೋನಿ ಅವರ ಹೊಸ ಅಪ್ಡೇಟ್ಗಾಗಿ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಸದಾ ಕಾಯುತ್ತಿರುತ್ತಾರೆ.
ಸದ್ಯ ಮಹೇಂದ್ರ ಸಿಂಗ್ ಧೋನಿ ಅವರ ಕುರಿತು ಹೊಸ ಸುದ್ದಿಯೊಂದ ಹರಿದಾಡುತ್ತಿದೆ. 2024ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಎಂಎಸ್ ಧೋನಿಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಧೋನಿ ಅವರನ್ನು ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿ ಧೋನಿ ಚುನಾವಣಾ ಆಯೋಗದ ಜಾಗೃತಿ ಕಾರ್ಯಕ್ರಮ SVEEP(ಸಿಸ್ಟಮ್ಯಾಟಿಕ್ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ)ನ ಭಾಗವಾಗಲಿದ್ದಾರೆ. ಮತದಾರರಿಗೆ ಮತ ಹಾಕುವಂತೆ ಧೋನಿ ಮನವಿ ಮಾಡಲಿದ್ದಾರೆ ಎಂದು ಜಾರ್ಖಂಡ್ ಚುನಾವಣಾಧಿಕಾರಿ ಕೆ. ರವಿಕುಮಾರ್ ಹೇಳಿದ್ದಾರೆ.
ಧೋನಿ ಅವರು ವಿಧಾನಸಭಾ ಚುನಾವಣೆಗೆ ತಮ್ಮ ಫೋಟೋ ಬಳಸಲು ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದ್ದಾರೆ ಎಂದು ಚುನಾವಣಾಧಿಕಾರಿ ಕೆ. ರವಿಕುಮಾರ್ ತಿಳಿಸಿದರು. ಮಹೇಂದ್ರ ಸಿಂಗ್ ಧೋನಿ ತಮ್ಮ ಫೋಟೋ ಬಳಸಲು ಚುನಾವಣಾ ಆಯೋಗಕ್ಕೆ ಒಪ್ಪಿಗೆ ನೀಡಿದ್ದಾರೆ. ಇತರ ವಿವರಗಳಿಗಾಗಿ ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಚುನಾವಣಾ ಆಯೋಗವು ಸ್ವೀಪ್ ಕಾರ್ಯಕ್ರಮಗಳಲ್ಲಿ ಅವರ ಭಾವಚಿತ್ರವನ್ನು ಬಳಸುತ್ತದೆ ಎಂದು ಹೇಳಿದ್ದಾರೆ.
ಗರಿಷ್ಠ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮತದಾರರನ್ನು ಪ್ರೇರೇಪಿಸುವ ಅವರ ಮನವಿಯನ್ನು ಮತದಾನದ ಶೇಕಡಾವಾರು ಹೆಚ್ಚಿಸಲು ಬಳಸಲಾಗುವುದು. ಧೋನಿ ಅವರು ಮತದಾರರ ಜಾಗೃತಿ ಅಭಿಯಾನದಲ್ಲಿ ಸಹಕರಿಸುತ್ತಾರೆ. ಹೆಸರಾಂತ ವ್ಯಕ್ತಿಗಳ ಜನಪ್ರಿಯತೆಯು ಮತದಾರರ ಜಾಗೃತಿ ಅಭಿಯಾನವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಜಾರ್ಖಂಡ್‌ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 43 ಸ್ಥಾನಗಳಿಗೆ ನವೆಂಬರ್ 13 ರಂದು ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ 38 ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಬರಲಿದೆ.(ಏಜೆನ್ಸೀಸ್)